ನಾವು ಮನೆಯಿಂದ ಹೊರಗೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳುತ್ತೇವೆ. ಕಾಡಿನಲ್ಲಿ ಓಡಾಡುವ ಹುಲಿ, ಚಿರತೆ, ಬೆಕ್ಕುಗಳಿಗೆ ಯಾರು ಚಪ್ಪಲಿ ಹೊಲಿಸಿಕೊಟ್ಟಿದ್ದಾರೆ? ಅವುಗಳೇನೂ ಶೂ ಅಂಗಡಿಗೆ ಹೋಗುವುದಿಲ್ಲ. ಕಲ್ಲು, ಮಣ್ಣು, ಮುಳ್ಳುಗಳ ನಡುವೆ ಓಡಾಡುತ್ತವೆ. ಆದರೂ ಅವುಗಳ ಪಾದಗಳನ್ನು ಮುಟ್ಟಿ ನೋಡಿದರೆ ಮೃದುವಾಗಿ ಮೆತ್ತನೆಯ ಅನುಭವ!
ಅಷ್ಟಕ್ಕೂ ಇಷ್ಟು ಮೃದುವಾದ ಪಾದ ಇಟ್ಟುಕೊಂಡು ಕಾಡಿನಲ್ಲಿ ಹೇಗೆ ಬದುಕುತ್ತವೆ? ಅದಕ್ಕಿಂತ ದೊಡ್ಡ ಪ್ರಶ್ನೆ ಎಂದರೆ, ಒಣಗಿದ ಎಲೆಗಳ ಮೇಲೆ ನಾವು ನಡೆದರೆ ಸರಸರ ಎಂದು ಸದ್ದಾಗಿ ಇಡೀ ಓಣಿಗೆ ಗೊತ್ತಾಗುತ್ತದೆ. ಅದೇ ಬೆಕ್ಕು ನಡೆದುಹೋದರೆ ಪಕ್ಕದಲ್ಲೇ ಕುಳಿತಿದ್ದರೂ ಕೆಲವೊಮ್ಮೆ ಗೊತ್ತೇ ಆಗುವುದಿಲ್ಲ!
ಇದು ಪ್ರಕೃತಿಯ ಇಂಜಿನಿಯರಿಂಗ್ ಕೌಶಲ! ಬೆಕ್ಕು ಮತ್ತು ಹುಲಿಗಳ ಪಾದದ ಕೆಳಭಾಗದಲ್ಲಿ ಮೃದುವಾದ, ಕೊಬ್ಬಿನ ಅಂಗಾಂಶ ಹೊಂದಿರುವ ಕುಷನ್‌ಗಳಿವೆ. ಅವು ನೆಲಕ್ಕೆ ಕಾಲು ತಾಕಿದಾಗ ಉಂಟಾಗುವ ಹೊಡೆತವನ್ನು ಹೀರಿಕೊಳ್ಳುತ್ತವೆ. ಹೊರಭಾಗದಲ್ಲಿ ಸವೆತವನ್ನು ತಡೆಯುವ ಗಟ್ಟಿಯಾದ ಚರ್ಮವೂ ಇದೆ. ಅಂದರೆ ಹೊರಗೆ ರಕ್ಷಣೆಯ ಕವಚ, ಒಳಗೆ ಮೆತ್ತನೆಯ ದಿಂಬು! ನಾವು ಹಾಕಿಕೊಳ್ಳುವ ಶೂಗಳಲ್ಲೂ ಇಂಥ ವ್ಯವಸ್ಥೆ ಇರುತ್ತದೆ. ಆದರೆ ಈ ಪ್ರಾಣಿಗಳಿಗೆ ಅದು ಹುಟ್ಟಿನಿಂದಲೇ ಸಿಕ್ಕಿದೆ. ಪ್ರಕೃತಿಯೇ ಕೊಟ್ಟಿರುವ ಫ್ರೀ ಫಿಟ್ಟಿಂಗ್!
ಆದರೆ ಒಣ ಎಲೆಗಳ ಮೇಲೆ ಶಬ್ದ ಮಾಡದೆ ನಡೆಯುವ ರಹಸ್ಯ ಪಾದದ ಮೃದುತ್ವವೊಂದೇ ಕಾರಣವಲ್ಲ. ಬೆಕ್ಕುಗಳು ಮುಖ್ಯವಾಗಿ ಬೆರಳುಗಳ ಆಧಾರದಲ್ಲಿ ನಡೆಯುತ್ತವೆ. ಕಾಲನ್ನು ಧೊಪ್ಪನೆ ನೆಲಕ್ಕೆ ಅಪ್ಪಳಿಸುವ ಬದಲು ನಿಧಾನವಾಗಿ, ನಿಯಂತ್ರಿತವಾಗಿ ಇಡುತ್ತವೆ. ಬೇಟೆಯಾಡುವಾಗ ಈ ಕೌಶಲ ಇನ್ನಷ್ಟು ಮುಖ್ಯವಾಗುತ್ತದೆ. ಎದುರಿನ ಪ್ರಾಣಿಗೆ ತಮ್ಮ ಸುಳಿವು ಸಿಗಬಾರದಲ್ಲ! ಹೊಟ್ಟೆ ತುಂಬಿಸಿಕೊಳ್ಳುವ ಕೆಲಸಕ್ಕೆ ಡಂಗುರ ಸಾರಿಕೊಂಡು ಹೋಗಲು ಸಾಧ್ಯವೇ?!
ಹಾಗಂತ ಬೆಕ್ಕು ನಡೆದರೆ ಶಬ್ದವೇ ಆಗುವುದಿಲ್ಲ ಎಂದಲ್ಲ. ಒಣ ಎಲೆ ಗರಿಗರಿಯಾಗಿ ಮುರಿದರೆ ಬೆಕ್ಕಿಗೂ ಸದ್ದು ತಪ್ಪಿದ್ದಲ್ಲ. ಎಲೆಗಳ ದಪ್ಪ, ತೇವಾಂಶ, ಕೆಳಗಿರುವ ಮಣ್ಣು ಅಥವಾ ಕಲ್ಲುಗಳೂ ಶಬ್ದವನ್ನು ನಿರ್ಧರಿಸುತ್ತವೆ. ಹುಲಿ ಎಲೆಯ ಮೇಲೆ ಕಾಲಿಟ್ಟಾಗ ಶಬ್ದವಾಗಬಹುದು. ಆದರೆ ಅದರ ಹೆಜ್ಜೆಯ ಹೊಡೆತವನ್ನು ನಿಯಂತ್ರಿಸುವ ದೇಹದ ರಚನೆ ಶಬ್ದ ಕಡಿಮೆಯಾಗಲು ನೆರವಾಗುತ್ತದೆ.
ಇಲ್ಲಿ ನಮಗೊಂದು ಪಾಠವೂ ಇದೆ. ಪ್ರಕೃತಿಯಲ್ಲಿ ಯಾವುದೂ ಸುಮ್ಮನೆ ರೂಪುಗೊಂಡಿಲ್ಲ. ಬೆಕ್ಕಿನ ಪಾದದ ಮೃದುತ್ವ ಕೇವಲ ಮುದ್ದು ಮಾಡುವುದಕ್ಕಲ್ಲ. ರಕ್ಷಣೆ, ಸಮತೋಲನ, ಮೌನ ನಡಿಗೆ ಹೀಗೆ ಹಲವು ಕೆಲಸಗಳಿಗೆ ನೆರವಾಗುತ್ತದೆ. ಮನುಷ್ಯ ಚಪ್ಪಲಿ ಕಂಡುಹಿಡಿಯುವ ಮೊದಲೇ ಪ್ರಕೃತಿ ಈ ವಿನ್ಯಾಸವನ್ನು ಸಿದ್ಧಪಡಿಸಿತ್ತು. ನಾವು ಇನ್ನೂ ಶೂಗಳ ಮೆತ್ತನೆಯ ಅಡಿಭಾಗಕ್ಕೆ ಹೊಸ ತಂತ್ರಜ್ಞಾನ ಹುಡುಕುತ್ತಿದ್ದೇವೆ. ಬೆಕ್ಕು ಮಾತ್ರ ಅದನ್ನು ಹಾಕಿಕೊಂಡೇ ಹುಟ್ಟಿದೆ!
ಹಾಗಾಗಿ ಮನೆಯ ಬೆಕ್ಕು ರಾತ್ರಿ ಎರಡು ಗಂಟೆಗೆ ನಿಮ್ಮ ಹಾಸಿಗೆಯ ಮೇಲೆ ಬಂದು ಕುಳಿತರೂ ನಿಮಗೆ ಗೊತ್ತಾಗದಿದ್ದರೆ, ಅದನ್ನು ಭೂತ ಎಂದು ಅನುಮಾನಿಸಬೇಡಿ. ಅದು ಪ್ರಕೃತಿಯ ಮೌನ ತಂತ್ರಜ್ಞಾನವನ್ನು ಬಳಸುತ್ತಿದೆ ಅಷ್ಟೆ. ಆದರೆ ಬೆಕ್ಕು ನಿಮ್ಮ ಮುಖದ ಹತ್ತಿರವೇ ಕುಳಿತು ಮೀಸೆ ತಾಗಿಸಿದರೆ ಮಾತ್ರ, ಆ ತಂತ್ರಜ್ಞಾನಕ್ಕೆ ನೀವು ಎಚ್ಚರಗೊಳ್ಳಲೇಬೇಕು!


