Monday, October 26, 2026
HomeUncategorizedಶಿರಸಿಯಲ್ಲಿ ತಿರುಪತಿ ನಾಮ ಪತ್ರಕರ್ತನ ಹಾವಳಿ?!

ಶಿರಸಿಯಲ್ಲಿ ತಿರುಪತಿ ನಾಮ ಪತ್ರಕರ್ತನ ಹಾವಳಿ?!

ಶಿರಸಿ: ಶಿರಸಿ ತಾಲೂಕಿನಂತ ಪ್ರಶಾಂತ ವಾತಾವರಣದಲ್ಲಿ ಹೊಸ ಜಾತಿಯ ‘ಉಪದ್ರವಿʼಗಳು ಸದ್ದಿಲ್ಲದೆ ಮೆರೆಯುತ್ತಿವೆ. ಯಾವುದೇ ಪತ್ರಿಕೆಯ ಗೇಟ್ ಕಾವಲು ಕಾಯಲೂ ಯೋಗ್ಯತೆಯಿಲ್ಲದವರು, ಇಂದು ಮೂರು ಲೋಕಗಳನ್ನೂ ಮೀರಿಸುವಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ಏಕಕಾಲಕ್ಕೆ ಸುದ್ದಿ ಹಾಕಿ ಬಿಲ್ಡಪ್ ಕೊಡುವುದನ್ನು ನೋಡಿದರೆ, ಅತ್ತ ನಗಲೂ ಆಗದ, ಅಳಲೂ ಆಗದ ಅಯೋಮಯ ಸ್ಥಿತಿ!

ಯಾವುದೇ ದಿನಪತ್ರಿಕೆಯ ಕನಿಷ್ಠ ಕೆಲಸ ಮಾಡಿರುವ ಅನುಭವ ಜ್ಞಾನವೂ ಇಲ್ಲದವರು, ತಾವು ಯಾವುದೋ ಅಗಾಧ ಪ್ರಸಾರವಿರುವ ಮಹಾಪತ್ರಿಕೆಯ ಅಧಿಪತಿಗಳಂತೆ ಬಿಂಬಿಸಿಕೊಳ್ಳುವುದು ಆಧುನಿಕ ಕಾಲದ ದೊಡ್ಡ ವಿಪರ್ಯಾಸ. ಇವರ ಕೈಯಲ್ಲಿ ಪತ್ರಿಕೆಯ ಬದಲು ಡಕೋಟಾ ಮೊಬೈಲ್ (ಪುಕ್ಕಟ್ಟೆ ಸಿಕ್ಕಿರಲೂಬಹುದು!) ಸಿಕ್ಕ ಬಳಿಕ, ಶಿರಸಿಯಲ್ಲಿ ಯಾವುದೇ ಹೊಸ ಮಳಿಗೆ, ಶೋರೂಂ ತೆರೆದರೆ ಸಾಕು, ʼನಂದೆಲ್ಲಿಡ್ಲಿ ನಂದಗೋಪಾಲʼ ಎನ್ನುವಂತೆ ನುಗ್ಗಿಬಿಡುತ್ತಾರಂತೆ!

ʻನಿಮ್ಮ ಬಳಿ ಲೈಸನ್ಸ್ ಇದೆಯಾ? ಕಾಗದಪತ್ರ ಸರಿಯಾಗಿದೆಯಾ?ʼ ಎಂದು ಯಾವುದೋ ಅಧಿಕಾರಿಯಂತೆ ಪೋಸ್‌ ಕೊಟ್ಟು, ಜೇಬು ತುಂಬಿಸಿಕೊಳ್ಳುವುದೇ ಇವರ ಏಕೈಕ ಮತ್ತು ಅಂತಿಮ ಉದ್ದೇಶ. ಕಷ್ಟಪಟ್ಟು ವ್ಯಾಪಾರ ಮಾಡುವವರನ್ನು ಬೆದರಿಸಿ ಹಣ ಪೀಕುವುದೇ ಇವರ ನಿತ್ಯ ಕಾಯಕ.

ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ವ್ಯಾಪಾರ ನಡೆಸುತ್ತಿರುವವರ ಅಂಗಡಿಗಳ ಮುಂದೆ ನಿಂತು ಐದು ಲಕ್ಷದವರೆಗೆ ಹಣ ಎಬ್ಬಿಸಿ, ಜೇಬಿಗೆ ಇಳಿಸಿಕೊಂಡು ಮೆರೆಯುವ ಇವರ ಅವತಾರ ಅಸಹ್ಯ ಹುಟ್ಟಿಸುತ್ತದೆ.

ಇನ್ನು ಇವರಿಗೆ ಸಾಥ್ ನೀಡಲು ‘ಮಿಂಟೋಸ್ ಗ್ಯಾಂಗ್’ ಬೇರೆ ಇದೆಯಂತೆ! ಸತ್ಯ-ನ್ಯಾಯಗಳ ಹಾದಿಬಿಟ್ಟು, ಬೆಟ್ಟದಂತಹ ಬಳಕೆದಾರರನ್ನು ಕಂಡಕಂಡಲ್ಲಿ ಹೆದರಿಸುವುದು ಮತ್ತು ಕಾಡು ಇಲಾಖೆಯವರನ್ನು ಬ್ಲ್ಯಾಕ್‌ಮೇಲ್ ಮಾಡಿಕೊಂಡೇ ಬದುಕು ಸಾಗಿಸುತ್ತಿರುವ ಈ ಹಳೆಯ ಹೆಗ್ಗಣಗಳಿಗೆ ನಾಚಿಕೆ ಎಂಬುದೆಲ್ಲಿ ಎಂದು ಇಡೀ ತಾಲೂಕಿನ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಶಿರಸಿಯ ಭಕ್ತಿ ಸ್ಥಳದ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲಾ ಬರೆದು ಕಜ್ಜಾಯ ತಿಂದಿದ್ದರೂ ತಿರುಪತಿ ನಾಮನಿಗೆ ಬುದ್ಧಿ ಮಾತ್ರ ಬಂದೇ ಇಲ್ಲ. ಈಗ ಕೆಲ ದಿನಗಳ ಹಿಂದೆ ಶಿರಸಿಯ ಪ್ರತಿಷ್ಠಿತ ಸಹಕಾರಿ ಸಂಘವೊಂಡರ ಬಗ್ಗೆ ಮನಬಂದಂತೆ ಬರೆದು ಕೇಸ್ ಜಡಿಸಿಕೊಂಡ ಈತನಿಗೆ ಮರ್ಯಾದೆ ಎಂಬುದು ಮೂರು ಕಾಸಿಗೂ ಇಲ್ಲ.

ಯಾವ ಪತ್ರಿಕೆಯೂ ಇಲ್ಲದೆ ಪತ್ರಕರ್ತ ಎಂದು ಹೇಳಿಕೊಂಡು ಕೇವಲ ವಾಟ್ಸಾಪು, ಫೇಸ್‌ಬುಕ್‌ಗೆ ಸುದ್ದಿ ಹಾಕಿ ದರ್ಬಾರಿನ ಜೀವನ ನಡೆಸುವ ಈ ನಕಲಿ ಪರ್ತಕರ್ತನಿಗೆ ಕಾಸು ಎಲ್ಲಿಂದ ಬರುತ್ತದೆ ಎಂಬುದು ನೈಜ ಪತ್ರಕರ್ತರಿಗೆ, ಪಟ್ಟಣದ ಜನತೆಗೆ ಕಾಡುವ ನಿತ್ಯದ ಪ್ರಶ್ನೆ.

ವಾಟ್ಸಾಪ್ ಗ್ರೂಪ್‌ಗಳಿರಲಿ, ಯೂಟ್ಯೂಬ್ ಚಾನೆಲ್‌ಗಳಿರಲಿ ಎಲ್ಲೆಡೆ ಇವರದ್ದೇ ಹಾವಳಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾದ ಮಾಧ್ಯಮ ಕ್ಷೇತ್ರವನ್ನು ತಮ್ಮ ಹೊಟ್ಟೆಪಾಡಿನ ಭಿಕ್ಷಾಟನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಈ ಡಿಜಿಟಲ್ ಪುರಾಣವನ್ನು ಕಂಡು ಶಿರಸಿಯ ಜನಸಾಮಾನ್ಯರು ತಲೆಮೇಲೆ ಕೈಹೊತ್ತು ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಾಧ್ಯಮದ ಪವಿತ್ರ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಇಟ್ಟಿರುವ ಇಂತಹ ನಕಲಿ ಪತ್ರಕರ್ತರ ಮುಖವಾಡವನ್ನು ಸಮಾಜದ ಮುಂದೆ ಬಯಲು ಮಾಡುವ ಸಮಯ ಆದಷ್ಟು ಬೇಗ ಬರಲಿ ಎಂದು ಜನ ಎದುರು ನೋಡುತ್ತಿರುವುದಂತೂ ಸುಳ್ಳಲ್ಲ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share