ಯಲ್ಲಾಪುರ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕೆಂಬ ಆಗ್ರಹದೊಂದಿಗೆ ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಮನವಿ ಮಾಡಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು, ಪರಿಸರ ಮತ್ತು ಜನಜೀವನದ ಹಿತದೃಷ್ಟಿಯಿಂದ ನದಿ ತಿರುವು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಒತ್ತಾಯಿಸುವುದು ಅಗತ್ಯವಾಗಿದೆ ಎಂದು ಹೆಬ್ಬಾರ್ ಹೇಳಿದ್ದಾರೆ.
ಈ ಉದ್ದೇಶದೊಂದಿಗೆ ನಡೆಯುವ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಆ ಮೂಲಕ ಯೋಜನೆಯನ್ನು ಜಿಲ್ಲೆಯಿಂದ ಸಂಪೂರ್ಣವಾಗಿ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಮನವಿ ಮಾಡಿದ್ದಾರೆ.


