Wednesday, October 28, 2026
HomeLocal Newsಸಂಕನೂರು ಗೆಲುವು: ಯಲ್ಲಾಪುರದಲ್ಲಿ ಬಿಜೆಪಿ ವಿಜಯೋತ್ಸವ

ಸಂಕನೂರು ಗೆಲುವು: ಯಲ್ಲಾಪುರದಲ್ಲಿ ಬಿಜೆಪಿ ವಿಜಯೋತ್ಸವ

ಯಲ್ಲಾಪುರ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಐತಿಹಾಸಿಕ ಗೆಲುವು ದಾಖಲಿಸಿರುವುದು ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಮತದಾರರ ನಿಲುವನ್ನು ಪ್ರತಿಬಿಂಬಿಸಿದೆ ಎಂದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ತಮ್ಮ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದರೂ ಸೋಲು ಎದುರಾಗಿದೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದು ಪ್ರಜ್ಞಾವಂತರ ಚುನಾವಣೆ ಎಂದು ಹೇಳಿದ್ದ ಬಿ.ಕೆ. ಹರಿಪ್ರಸಾದ್ ಅವರಿಗೆ ಮತದಾರರು ತಮ್ಮ ತೀರ್ಪಿನ ಮೂಲಕ ಉತ್ತರ ನೀಡಿದ್ದಾರೆ. ಈ ಗೆಲುವು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವಾಗಿದೆ ಎಂದು ಹೇಳಿದರು.

ಉದ್ಯಮಿ ಬಾಲಕೃಷ್ಣ ನಾಯ್ಕ ಮಾತನಾಡಿ, ಯಲ್ಲಾಪುರದಲ್ಲಿ ಮೊಳಗಿದ ಗೆಲುವಿನ ಸಂಭ್ರಮ ಮುಂದಿನ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ. ಈ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ನಾಂದಿಯಾಗಲಿದೆ ಎಂದರು. ನೈತಿಕತೆಯ ಬಗ್ಗೆ ಮಾತನಾಡುವ ಬಿ.ಕೆ. ಹರಿಪ್ರಸಾದ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸುವ ವಿರೋಧ ಪಕ್ಷಗಳಿಗೆ, ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಬಲ್ಲದು ಎಂಬುದನ್ನು ಈ ಫಲಿತಾಂಶ ತೋರಿಸಿದೆ ಎಂದು ಅಭಿಪ್ರಾಯಪಟ್ಟರು. ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕೆಂಬ ಸಂಕಲ್ಪ ಕಾರ್ಯಕರ್ತರಲ್ಲಿದೆ. ಈ ಚುನಾವಣೆಯ ಫಲಿತಾಂಶ ಮುಂದಿನ ರಾಜಕೀಯ ಬೆಳವಣಿಗೆಗಳ ಮುನ್ಸೂಚನೆಯಾಗಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಪಕ್ಷದ ಅಭೂತಪೂರ್ವ ಗೆಲುವು ಮತದಾರರ ನಿಲುವನ್ನು ಸ್ಪಷ್ಟಪಡಿಸಿದೆ. ಈ ಫಲಿತಾಂಶ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ಪ್ರಮುಖರಾದ ಸೋಮೇಶ್ವರ ನಾಯ್ಕ, ವಿನೋದ ತಳೇಕರ, ಶ್ರೀನಿವಾಸ ಗಾಂವ್ಕರ್, ಗಣೇಶ ಪಾಟಣಕರ್, ರಜತ ಬದ್ದಿ, ರವಿ ದೇವಾಡಿಗ, ರಜನಿ ಚಂದ್ರಶೇಖರ, ಪ್ರದೀಪ ಯಲ್ಲಾಪುರಕರ್, ಗಣೇಶ ಹೆಗಡೆ, ಕೇಶವ ಮರಾಠಾ ಸಹಸ್ರಳ್ಳಿ, ನಾಗರಾಜ ಭೋವಿ ಸಹಸ್ರಳ್ಳಿ, ಮಹೇಶ ನಾಯ್ಕ, ಸದಾಶಿವ ಚಿಕ್ಕೊತ್ತಿ ಮುಂತಾದವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share