ಅಘನಾಶಿನಿ ನದಿ ಜೋಡಣೆ ವಿರೋಧಿ ಸಭೆಯಲ್ಲಿ ಎನ್.ವಿ. ಹೆಗಡೆ ಮುತ್ತಿಗೆ
ಸಿದ್ದಾಪುರ: ಅಘನಾಶಿನಿ ನದಿ ಜೋಡಣೆ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರದ ಪ್ರತಿಕ್ರಿಯೆ ಹೊಸ ಬಲ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಹಿಂದಿನ ಬೇಡ್ತಿ-ಅಘನಾಶಿನಿ ಕೊಳ್ಳ ಮುಳುಗಡೆ ಯೋಜನೆ ವಿರೋಧ ಸಮಿತಿಯ ಕಾರ್ಯದರ್ಶಿ ಎನ್.ವಿ. ಹೆಗಡೆ ಮುತ್ತಿಗೆ ಹೇಳಿದರು.
ಸಿದ್ದಾಪುರದ ರಾಘವೇಂದ್ರ ಸಭಾಭವನದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಅಘನಾಶಿನಿ ನದಿ ಜೋಡಣೆ ವಿರೋಧಿ ಸಭೆಯಲ್ಲಿ ಮಾತನಾಡಿದ ಅವರು, ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರದಿಂದ ಬಂದಿರುವ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.
ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಸೇರಿದಂತೆ ಯಾವುದೇ ಅಭಿವೃದ್ಧಿ ಯೋಜನೆಗಳು ವಿಶ್ವ ಪರಂಪರೆ ಸಂರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪರಿಸರ ಸಮತೋಲನಕ್ಕೆ ಧಕ್ಕೆಯಾಗಬಾರದು ಎಂದು ಯುನೆಸ್ಕೋ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಎಂದು ಅವರು ಹೇಳಿದರು.
1972ರ ವಿಶ್ವ ಪರಂಪರೆ ಒಪ್ಪಂದದ ಪ್ರಕಾರ ನೈಸರ್ಗಿಕ ಪರಂಪರೆಗಳ ರಕ್ಷಣೆ ಮತ್ತು ಸಂರಕ್ಷಣೆ ಆಯಾ ದೇಶಗಳ ಜವಾಬ್ದಾರಿಯಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳುವ ಯೋಜನೆಗಳು ಸುಸ್ಥಿರ ಅಭಿವೃದ್ಧಿಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಯುನೆಸ್ಕೋ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ಎನ್.ವಿ. ಹೆಗಡೆ ತಿಳಿಸಿದರು.
ಕೆ.ಟಿ. ನಾಯ್ಕ ಸ್ವಾಗತಿಸಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ನಾಯ್ಕ ನರಮುಂಡಗಿ, ಸಂಕೇತ ನಾಯ್ಕ ಹಲಗೇರಿ, ವಿದ್ಯಾ ನಾಯ್ಕ ಹಾರ್ಸಿಕಟ್ಟಾ, ರಾಜು ನಾಯ್ಕ ಕ್ಯಾದಗಿ, ದಿವಾಕರ್ ನಾಯ್ಕ ಬಾಳೆಜಡ್ಡಿ ಸೇರಿದಂತೆ ಹಲವರು ಯೋಜನೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು.
ಹರಿಹರ ನಾಯ್ಕ ತಂಡಾಗುಂಡಿ, ಶ್ರೀಧರ ಹೆಗಡೆ ಕೆರೆಮನೆ, ಎಂ.ಆರ್. ನಾಯ್ಕ ಬೇಡ್ಕಣಿ ಸೇರಿದಂತೆ ವಿವಿಧ ಭಾಗಗಳ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ರವೀಂದ್ರ ನಾಯ್ಕಗೆ ಅಭಿನಂದನೆ
ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ವಿರುದ್ಧ ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರಕ್ಕೆ ಆಕ್ಷೇಪ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ವಿಶ್ವ ಪರಂಪರೆ ಸಮಾವೇಶದ ಮಾರ್ಗಸೂಚಿ ಪಾಲನೆ ಕುರಿತು ಸೂಚನೆ ಬರಲು ಕಾರಣಕರ್ತರಾದ ಹೋರಾಟಗಾರ ರವೀಂದ್ರ ನಾಯ್ಕ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.