Friday, July 24, 2026
Join WhatsApp Group
HomeLocal Newsಡಾ. ಅಂಬೇಡ್ಕರರ ಸಮಾನತೆಯ ಸಂದೇಶ ಪಾಲಿಸಿ: ಡಿಸಿ

ಡಾ. ಅಂಬೇಡ್ಕರರ ಸಮಾನತೆಯ ಸಂದೇಶ ಪಾಲಿಸಿ: ಡಿಸಿ

ಕಾರವಾರ: ಡಾ. ಬಿ.ಆರ್.ಅಂಬೇಡ್ಕರ್ ಅವರು ಇಡೀ ಮಾನವ ಸಮುದಾಯಕ್ಕೆ ನೀಡಿರುವ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಅನುಸರಿಸಿ, ಅದರಂತೆ ನಡೆಯುವ ಮೂಲಕ ಅಂಬೇಡ್ಕರರಿಗೆ ಗೌರವ ಸಲ್ಲಿಸಿ, ಪ್ರತಿದಿನವೂ ಅವರನ್ನು ನೆನೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ  ದೋಭಿಘಾಟ್ ರಸ್ತೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ  ನಡೆದ ಡಾ. ಬಿ.ಆರ್ ಅಂಬೇಡ್ಕರರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಎಲ್ಲಾ ಸಮುದಾಯಗಳು, ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ಅಭಿವೃದ್ಧಿ ಹೊಂದಲಿ ಎಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗದ ಜನತೆ ಸೇರಿದಂತೆ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಸಮಾನ ಅವಕಾಶಗಳು ದೊರೆಯುವಂತೆ ಮಾಡಿದ್ದಾರೆ.

ಅವರ ಈ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ದೈನಂದಿನ ಚಟುವಟಿಕೆಗಳ ಎಲ್ಲಾ ಕ್ಷೇತ್ರಗಳಲ್ಲೂ ಅಳಡಿಸಿಕೊಂಡು, ತಮಗಿಂತ ಹಿಂದುಳಿದವರು ತಮ್ಮ ಜೊತೆಗೆ ಸಮಾನವಾಗಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಅವಕಾಶಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಅಂಬೇಡ್ಕರರು ನೀಡಿರುವ ಶಿಕ್ಷಣ, ಸಂಘಟನೆ, ಹೋರಾಟದ ಸಂದೇಶಗಳ ಮೂಲಕ ಅವಕಾಶ ವಂಚಿತರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸರ್ಕಾರಿ ಅಧಿಕಾರಿಗಳು ಸಂವಿಧಾನ ನೀಡಿರುವ ಸಮಾನತೆಯ ಸಂದೇಶವನ್ನು ಪಾಲಿಸಿ, ಸಂವಿಧಾನದ ತತ್ವಗಳಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಅಂಕೋಲಾದ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ಮಾತನಾಡಿ, ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂವಿಧಾನವು ದೇಶಕ್ಕೆ ದಾರಿದೀಪವಾಗಿದ್ದು, ಸಂವಿಧಾನ ರಚನೆಯ ಮೂಲಕ ಭಾರತವು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ಅಂಬೇಡ್ಕರ್ ಅವರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಜಿಲ್ಲೆಯ ಅಭ್ಯರ್ಥಿಗಳಿಗೆ ಸನ್ಮಾನ ಮತ್ತು ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ್, ಪ.ಜಾತಿ/ಪಂಗಡದ ಮುಖಂಡರಾದ ದೀಪಕ್ ಕುಡಾಲಕರ್, ಎಲಿಷಾ ಪಾಟೀಲ್, ನಾಗರಾಜ ತಳವಾರ, ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು,ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share