ಅಂಕೋಲಾ: ಮನೆಯ ಗೋದ್ರೇಜ್ ಕಪಾಟಿನಲ್ಲಿದ್ದ ಸುಮಾರು 4.50 ಲಕ್ಷ ರೂ ಮೌಲ್ಯದ 72 ಗ್ರಾಂ ಚಿನ್ನಾಭರಣಗಳು ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಮನೆಯಲ್ಲಿದ್ದ ಸಂಬಂಧಿಕನೊಬ್ಬರ ಮೇಲೆ ಸಂಶಯವಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ವಂದಿಗೆ ಗ್ರಾಮದ 77 ವರ್ಷದ ರೈತ ಹೊನ್ನಪ್ಪ ಬೋಮ್ಮಯ್ಯ ನಾಯಕ ಅವರು ಅಂಕೋಲಾ ಪೊಲೀಸ್ ಠಾಣೆಗೆ ನೀಡಿದ ಗಣಕೀಕೃತ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಪ್ಪ ಅವರ ಮಗನಿಗೆ ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ಸೊಸೆ ಶ್ರೀದೇವಿ ತಮ್ಮ ತವರು ಉಡುಪಿಯಿಂದ ವಂದಿಗೆ ಮನೆಗೆ ಬಂದಾಗ ವಿವಿಧ ಬಂಗಾರದ ಆಭರಣಗಳನ್ನು ತಂದಿದ್ದರು. ಅವುಗಳನ್ನು ಮನೆಯ ಗೋದ್ರೇಜ್ ಕಪಾಟಿನಲ್ಲಿದ್ದ ಡಬ್ಬಿಯೊಂದರಲ್ಲಿ ಇಟ್ಟುಕೊಂಡಿದ್ದರು.
ಮೇ 11ರಂದು ಪಕ್ಕದ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಶ್ರೀದೇವಿ ಕೆಲವು ಆಭರಣಗಳನ್ನು ಧರಿಸಿಕೊಂಡು ಹೋಗಿ, ಸಂಜೆ ಮನೆಗೆ ಮರಳಿದ ಬಳಿಕ ಅವುಗಳನ್ನು ತೆಗೆದು ಅದೇ ಡಬ್ಬಿಯಲ್ಲಿ ಇಟ್ಟಿದ್ದರು. ಆಭರಣಗಳನ್ನು ಗೋದ್ರೇಜ್ ಕಪಾಟಿನಲ್ಲಿ ಇಟ್ಟಿರುವ ವಿಷಯವನ್ನು ಮನೆಯವರಿಗೆ ತಿಳಿಸಿ ಬಳಿಕ ಉಡುಪಿಗೆ ತೆರಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲವು ದಿನಗಳ ಬಳಿಕ ಶ್ರೀದೇವಿ ಮತ್ತೆ ವಂದಿಗೆ ಮನೆಗೆ ಬಂದು ಸುಮಾರು ಒಂದು ವಾರ ಉಳಿದುಕೊಂಡಿದ್ದರು. ಜೂನ್ 4ರಂದು ಮನೆಗೆ ತೆರಳುವ ಮುನ್ನ ಗೋದ್ರೇಜ್ ಕಪಾಟಿನಲ್ಲಿದ್ದ ಆಭರಣಗಳ ಡಬ್ಬವನ್ನು ತೆರೆದು ನೋಡಿದಾಗ, ತಾವು ಇಟ್ಟಿದ್ದ ಬಂಗಾರದ ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು.
ನಂತರ ಕುಟುಂಬದವರು ಮನೆಯಲ್ಲೂ ಹಾಗೂ ಗೋದ್ರೇಜ್ ಕಪಾಟಿನಲ್ಲೂ ಆಭರಣಗಳಿಗಾಗಿ ಹುಡುಕಾಟ ನಡೆಸಿದರೂ ಅವು ಪತ್ತೆಯಾಗಿರಲಿಲ್ಲ. ಮೇ 11ರಿಂದ ಜೂನ್ 4ರ ನಡುವಿನ ಅವಧಿಯಲ್ಲಿ ಸೊಸೆಯ ತಂಗಿ ಎಚ್.ಎ. ಪ್ರಭಾವತಿ, ಅವರ ಪತಿ ರಾಘವೇಂದ್ರ ಬಿ. ಹಾಗೂ ಸೊಸೆಯ ಸ್ನೇಹಿತೆ ವಿನ್ನಿಬಾಯಿ ಅವರು ಮನೆಗೆ ಬಂದು ಉಳಿದು ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸೊಸೆಯ ತಂಗಿಯ ಪತಿ ರಾಘವೇಂದ್ರ ಬಿ. ಅವರ ಮೇಲೆ ಚಿನ್ನಾಭರಣಗಳನ್ನು ಕದ್ದಿರುವ ಬಗ್ಗೆ ಸಂಶಯವಿರುವುದಾಗಿ ಹೊನ್ನಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ. (ಆದರೆ, ರಾಘವೇಂದ್ರ ಅವರೇ ಆಭರಣಗಳನ್ನು ಕದ್ದಿದ್ದಾರೆ ಎಂಬುದು ಇನ್ನೂ ಸಾಬೀತಾಗಿಲ್ಲ ಇದು ದೂರುದಾರರು ವ್ಯಕ್ತಪಡಿಸಿರುವ ಸಂಶಯ ಮಾತ್ರ.)
ನಾಪತ್ತೆಯಾಗಿರುವ ಆಭರಣಗಳಲ್ಲಿ ಸುಮಾರು 20 ಗ್ರಾಂ ತೂಕದ ಬಂಗಾರದ ಸರ, 4 ಗ್ರಾಂ ತೂಕದ ಚೈನ್, 8 ಗ್ರಾಂ ತೂಕದ ಮತ್ತೊಂದು ಚೈನ್, 16 ಗ್ರಾಂ ತೂಕದ ಎರಡು ಬಳೆಗಳು, 4 ಗ್ರಾಂ ತೂಕದ ಉಂಗುರ, 10 ಗ್ರಾಂ ತೂಕದ ಬ್ರೇಸ್‌ಲೇಟ್ ಹಾಗೂ 10 ಗ್ರಾಂ ತೂಕದ ಒಂದು ಜೋಡಿ ಕಿವಿಯೋಲೆ ಸೇರಿವೆ. ಇವುಗಳ ಒಟ್ಟು ತೂಕ ಸುಮಾರು 72 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 4.50 ಲಕ್ಷ ರೂ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಭರಣಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದ ಬಳಿಕ ಕುಟುಂಬದವರು ಹುಡುಕಾಟ ನಡೆಸಿ, ಪರಸ್ಪರ ಚರ್ಚಿಸಿದ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಹೊನ್ನಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಕುರಿತು ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದು, ಚಿನ್ನಾಭರಣಗಳು ನಾಪತ್ತೆಯಾಗಿರುವ ಸಂದರ್ಭ, ಮನೆಗೆ ಬಂದು ಹೋಗಿದ್ದವರ ವಿವರ ಹಾಗೂ ಇತರ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕಿದೆ.