Sunday, September 6, 2026
Join WhatsApp Group
HomeLocal Newsಅರಬೈಲ್ ಘಟ್ಟದಲ್ಲಿ ಮತ್ತೊಂದು ಅಪಘಾತ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಅರಬೈಲ್ ಘಟ್ಟದಲ್ಲಿ ಮತ್ತೊಂದು ಅಪಘಾತ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ವಾಹನ ಸವಾರರು ಒಂದು ಕ್ಷಣ ಎಚ್ಚರ ತಪ್ಪಿದರೂ ಪರಿಸ್ಥಿತಿ ಕೈಮೀರುವ ಸಾಧ್ಯತೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಅಪಘಾತ ಸಾಕ್ಷಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರ (ಹೆದ್ದಾರಿ 52) ಅರಬೈಲ್ ಘಟ್ಟದ ಕಡಿದಾದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯ ಕೈ ಮೂಳೆ ಮುರಿದಿದೆ.

ಘಟ್ಟದ ಅಪಾಯಕಾರಿ ತಿರುವಿನಲ್ಲಿ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನತ್ತ ಮುನ್ನುಗ್ಗಿದೆ ಎನ್ನಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕ್ಷಣಾರ್ಧದಲ್ಲಿ ಸಮಯಪ್ರಜ್ಞೆ ಮೆರೆದು, ಮುಖಾಮುಖಿ ಡಿಕ್ಕಿ ತಪ್ಪಿಸಲು ಬಸ್ ಅನ್ನು ರಸ್ತೆ ಬದಿಯ ಗುಡ್ಡದತ್ತ ತಿರುಗಿಸಿದ್ದಾರೆ. ಪರಿಣಾಮ ಮಿನಿ ಬಸ್ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ಭಾಗಶಃ ಜಖಂಗೊಂಡಿವೆ.

ಚಾಲಕ ತಕ್ಷಣ ತೆಗೆದುಕೊಂಡ ನಿರ್ಧಾರದಿಂದಾಗಿ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗುವುದನ್ನು ತಪ್ಪಿಸಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಯಲ್ಲಾಪುರ ಪೊಲೀಸರು ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಯಲ್ಲಾಪುರದಿಂದ ಅಂಕೋಲಾ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಮಲೆನಾಡಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ. ಆದರೆ ಘಟ್ಟದ ಉದ್ದಕ್ಕೂ ಇರುವ ಕಡಿದಾದ ಇಳಿಜಾರು, ತೀವ್ರ ತಿರುವುಗಳು ಚಾಲಕರಿಗೆ ಸವಾಲಾಗಿವೆ. ಮಳೆಗಾಲದಲ್ಲಿ ರಸ್ತೆ ತೇವಗೊಂಡಾಗ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ. ಘಟ್ಟದ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕೊನೆಯ ಕ್ಷಣದಲ್ಲಿ ಗೋಚರಿಸುವ ಸಾಧ್ಯತೆಯಿರುವುದರಿಂದ ವೇಗ ನಿಯಂತ್ರಣ ಹಾಗೂ ಎಚ್ಚರಿಕೆಯ ಚಾಲನೆ ಇಲ್ಲಿ ಅತ್ಯಂತ ಅಗತ್ಯ.

ವಿಶೇಷವಾಗಿ ದೊಡ್ಡ ವಾಹನಗಳು ಹಾಗೂ ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳು ತಿರುವುಗಳಲ್ಲಿ ನಿಯಂತ್ರಣ ಕಳೆದುಕೊಂಡರೆ ಅಪಘಾತದ ತೀವ್ರತೆ ಹೆಚ್ಚುವ ಸಾಧ್ಯತೆಯಿದೆ. ಹೀಗಾಗಿ ಅರಬೈಲ್ ಘಟ್ಟದಲ್ಲಿ ವೇಗ ನಿಯಂತ್ರಣ, ಎಚ್ಚರಿಕೆ ಫಲಕಗಳು, ಅಗತ್ಯವಿರುವ ಕಡೆ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಅಪಾಯಕಾರಿ ತಿರುವುಗಳ ಸಮರ್ಪಕ ನಿರ್ವಹಣೆಯತ್ತ ಸಂಬಂಧಪಟ್ಟವರು ಹೆಚ್ಚಿನ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share