Ad
Ad
Ad
Home Local News ಮೌಲ್ಯಾಧಾರಿತ ರಾಜಕಾರಣಕ್ಕೆ ರಾಮಕೃಷ್ಣ ಹೆಗಡೆ ಮಾದರಿ

ಮೌಲ್ಯಾಧಾರಿತ ರಾಜಕಾರಣಕ್ಕೆ ರಾಮಕೃಷ್ಣ ಹೆಗಡೆ ಮಾದರಿ

0
12

ಯಲ್ಲಾಪುರ: ರಾಜಕೀಯದಲ್ಲಿ ಮೌಲ್ಯಗಳು ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯವರ ಮೌಲ್ಯಾಧಾರಿತ ರಾಜಕಾರಣವನ್ನು ಕೇವಲ ನೆನಪಿಸಿಕೊಂಡರೆ ಸಾಲದು, ಅದನ್ನು ಆಚರಣೆಯಲ್ಲಿ ತರುವ ಅಗತ್ಯವಿದೆ ಎಂದು ರಾಮಕೃಷ್ಣ ಹೆಗಡೆ ಚಿರಂತನದ ಟ್ರಸ್ಟಿ ಹಾಗೂ ಯುಕೆ ಸೌಹಾರ್ದ ಬ್ಯಾಂಕ್ ನಿರ್ದೇಶಕ ಡಾ. ರವಿ ಭಟ್ ಬರಗದ್ದೆ ಅಭಿಪ್ರಾಯಪಟ್ಟರು.

ಯಲ್ಲಾಪುರದ ಯುಕೆ ಸೌಹಾರ್ದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ರಾಮಕೃಷ್ಣ ಹೆಗಡೆ ಚಿರಂತನ ಹಾಗೂ ಯುಕೆ ಸೌಹಾರ್ದ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೆಗಡೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ನಾಡಿಗೆ ಧೀಮಂತ ನಾಯಕತ್ವ ನೀಡಿದ ರಾಮಕೃಷ್ಣ ಹೆಗಡೆಯವರು ಪಾರದರ್ಶಕ, ಜಾತ್ಯತೀತ ಹಾಗೂ ಸರ್ವಜನರೂ ಒಪ್ಪುವಂತಹ ಆಡಳಿತವನ್ನು ಮುಖ್ಯಮಂತ್ರಿಯಾಗಿ ನೀಡಿದ್ದರು. ಅವರು ಪಾಲಿಸಿಕೊಂಡು ಬಂದ ಮೌಲ್ಯಗಳು ಅವರ ಕಾಲಾನಂತರವೂ ಅವರ ಹೆಸರನ್ನು ಅಜರಾಮರವಾಗಿಸಿವೆ. ಇಂದಿನ ಯುವಪೀಳಿಗೆ ಹೆಗಡೆಯವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಭವ್ಯ ನಾಡನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಯುಕೆ ಸೌಹಾರ್ದ ಬ್ಯಾಂಕಿಗೆ ರಾಮಕೃಷ್ಣ ಹೆಗಡೆಯವರೊಂದಿಗಿನ ವಿಶೇಷ ನಂಟನ್ನು ನೆನಪಿಸಿಕೊಂಡ ಡಾ. ರವಿ ಭಟ್ ಬರಗದ್ದೆ, 26 ವರ್ಷಗಳ ಹಿಂದೆ ಹೆಗಡೆಯವರೇ ನಮ್ಮ ಬ್ಯಾಂಕನ್ನು ಉದ್ಘಾಟಿಸಿದ್ದು ನಮ್ಮ ಹೆಮ್ಮೆ. ಇದೇ ಕಾರಣಕ್ಕೆ ಜಿಲ್ಲೆಯಾದ್ಯಂತ ಇರುವ ಬ್ಯಾಂಕಿನ ಎಲ್ಲ 10 ಶಾಖೆಗಳಲ್ಲೂ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಸಹಕಾರಿ ಪಿ.ಜಿ. ಹೆಗಡೆ ಕಳಚೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇಷ್ಟೊಂದು ಗಟ್ಟಿಯಾಗಿ ಬೆಳೆಯಲು ರಾಮಕೃಷ್ಣ ಹೆಗಡೆಯವರ ಕೊಡುಗೆ ಅಪಾರವಾಗಿದೆ. ಸಣ್ಣ ಸಣ್ಣ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರು ಮಾತೃ ಹೃದಯದ, ದೂರದೃಷ್ಟಿಯ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ತಮ್ಮಣ್ಣ ಕವಡಿಕೇರಿ, ನಾರಾಯಣ ಗಾಂವ್ಕರ್, ಪ್ರಮುಖರಾದ ಆರ್.ಜಿ. ಉಪಾಧ್ಯಾಯ ಮಂಚಿಕೇರಿ, ಗೋಪಾಲಕೃಷ್ಣ ಭಾಗ್ವತ್ ಮಳಲಗಾಂವ್, ಸಿ.ಜಿ. ಹೆಗಡೆ, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಿರಣ, ಸುಬ್ರಹ್ಮಣ್ಯ ಭಟ್, ಲಕ್ಷ್ಮಿ ನಾಯ್ಕ, ರಾಘವೇಂದ್ರ ಗಾಂವ್ಕರ್, ಸುನೀಲ್ ಭಟ್, ಸುರೇಶ್ ಬೇಕನಿ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಗೂ ರಾಮಕೃಷ್ಣ ಹೆಗಡೆಯವರ ಅಭಿಮಾನಿಗಳು ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!