ಬನವಾಸಿ: ಫೋನ್ನಲ್ಲಿ ನಡೆದ ಮಾತಿನ ಜಗಳವೊಂದು ಬಳಿಕ ಮನೆ ಬಳಿಯೇ ಗಲಾಟೆಯಾಗಿ, ಜಗಳ ಬಿಡಿಸಲು ಹೋದ 60 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿರಸಿ ತಾಲೂಕಿನ ದಾಸನಕೊಪ್ಪದ ಹನುಮಕ್ಕ ಹನುಮಂತ ಯಾಲಕ್ಕಿ (60) ಅವರು ನೀಡಿದ ದೂರಿನ ಆಧಾರದ ಮೇಲೆ ಕರ್ಣಕುಮಾರ, ರಾಮಣ್ಣ ಯಾಲಕ್ಕಿ ಹಾಗೂ ಮಣಿ ಎಂಬವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆಗಸ್ಟ್ 16ರಂದು ರಾತ್ರಿ ಸುಮಾರು 9 ಗಂಟೆಗೆ ಹನುಮಕ್ಕ ಅವರ ಮಗ ಗಣಪತಿ, ಮೈದುನನ ಮಗ ಕರ್ಣಕುಮಾರನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ಇಬ್ಬರ ನಡುವೆ ಜಗಳ ನಡೆದು ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವಿಚಾರವಾಗಿ ಕರ್ಣಕುಮಾರ, ಆತನ ತಂದೆ ರಾಮಣ್ಣ ಹಾಗೂ ಮಣಿ ಅವರು ಹನುಮಕ್ಕ ಅವರ ಮನೆಯ ಬಳಿ ಬಂದು, ಗಣಪತಿ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಹೇಳಿದಾಗ ಮತ್ತೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ವೇಳೆ ಎರಡೂ ಕಡೆಯವರ ನಡುವೆ ದೂಡಾಟ ನಡೆದಿದ್ದು, ಹನುಮಕ್ಕ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜಗಳ ಬಿಡಿಸಲು ಮುಂದಾದ ಹನುಮಕ್ಕ ಅವರನ್ನು ದೂಡಿ, ಕರ್ಣಕುಮಾರ ಕೈಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಹನುಮಕ್ಕ ಅವರು ನೀಡಿದ ದೂರನ್ನು ಸ್ವೀಕರಿಸಿದ ಬನವಾಸಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು, ಸೆಪ್ಟೆಂಬರ್ 3ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.