ಶಿರಸಿ: ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಮುಂದಿನ ಹೋರಾಟದ ರೂಪುರೇಷೆ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಆ.26ರಂದು ಮಧ್ಯಾಹ್ನ 4 ಗಂಟೆಗೆ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ವಿಶೇಷ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ಪೂಜ್ಯ ಸ್ವರ್ಣವಲ್ಲೀ shreegಗಳ ಸಾನಿಧ್ಯದಲ್ಲಿ ನಡೆಯಲಿರುವ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸಂಚಾಲಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಸಮಿತಿಯ ವತಿಯಿಂದ ಈಗಾಗಲೇ ಪತ್ರ ಚಳುವಳಿ, ಕರಾವಳಿ ಅಭಿಯಾನ ಹಾಗೂ ಬೆಂಗಳೂರಿನಲ್ಲಿ ಜಾಗೃತಿ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದೀಗ ಸೆಪ್ಟೆಂಬರ್ 3ರಂದು ನಡೆಯಲಿರುವ ‘ಕಾರವಾರ ಚಲೋ’ ಕಾರ್ಯಕ್ರಮದ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಇದರೊಂದಿಗೆ ಸಹಕಾರಿ ಸಂಘಗಳ ವಾರ್ಷಿಕ ಸಭೆಗಳಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವಂತೆ ಮಾಡುವ ಜವಾಬ್ದಾರಿ, ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಧರಣಿ ಹಾಗೂ ಅಕ್ಟೋಬರ್ 5ರ ರಾಸ್ತಾ ರೋಕೋ ಹೋರಾಟದ ಕುರಿತು ಮುಂದಿನ ಕಾರ್ಯತಂತ್ರ ರೂಪಿಸುವ ಉದ್ದೇಶವೂ ಸಭೆಯದ್ದಾಗಿದೆ.
ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಪದಾಧಿಕಾರಿಗಳು, ಸಂಚಾಲಕರು ಹಾಗೂ ಕಾರ್ಯಕರ್ತರು ಸಭೆಗೆ ತಪ್ಪದೇ ಆಗಮಿಸುವಂತೆ ಮನವಿ ಮಾಡಿದ್ದಾರೆ.