ಸಿದ್ದಾಪುರ: ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ ಸಿದ್ದಾಪುರ ತಾಲೂಕಿನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹11.53 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಆರೋಪದಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಪ್ಪರಮನೆ ನಿವಾಸಿ ರಾಘವೇಂದ್ರ ಹೆಗಡೆ (39) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿತರ ಹೆಸರು ಮತ್ತು ವಿಳಾಸ ಇನ್ನಷ್ಟೇ ಪತ್ತೆಯಾಗಬೇಕಿದೆ.
ಆರೋಪಿತರು ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ನಂಬಿಸಿ ಫಿರ್ಯಾದಿದಾರರನ್ನು ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ಗೆ ಸೇರಿಸಿಕೊಂಡಿದ್ದರು. ಬಳಿಕ 2025ರ ಅಕ್ಟೋಬರ್ 7ರಿಂದ ನವೆಂಬರ್ 5ರವರೆಗೆ ವಿವಿಧ ದಿನಗಳಲ್ಲಿ ಫೋನ್ಪೇ, ಯುಪಿಐ, ಆರ್ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಫಿರ್ಯಾದಿದಾರರ ಎಕ್ಸಿಸ್ ಬ್ಯಾಂಕ್ ಖಾತೆಯಿಂದ ₹5.53 ಲಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ಖಾತೆಯಿಂದ ₹6 ಲಕ್ಷ ಸೇರಿದಂತೆ ಒಟ್ಟು ₹11.53 ಲಕ್ಷ ಹಣವನ್ನು ಆನ್ಲೈನ್ ಟ್ರೇಡಿಂಗ್ಗೆ ಹೂಡಿಕೆ ಮಾಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಹೂಡಿಕೆ ಮಾಡಿದ್ದ ಹಣವನ್ನು ವಿತ್ಡ್ರಾ ಮಾಡಲು ಪ್ರಯತ್ನಿಸಿದಾಗ, ಮತ್ತೊಂದು ಹಂತದ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಹಣ ತುಂಬುವಂತೆ ಸೂಚಿಸಲಾಗಿದೆ. ಈ ಹಂತದಲ್ಲಿ ಅನುಮಾನಗೊಂಡ ರಾಘವೇಂದ್ರ ಹೆಗಡೆ ತಾವು ವಂಚನೆಯ ಜಾಲಕ್ಕೆ ಸಿಲುಕಿರುವುದನ್ನು ಅರಿತುಕೊಂಡಿದ್ದಾರೆ.
ಬಳಿಕ ಅವರು ಸೈಬರ್ ಕ್ರೈಂ ಸಹಾಯವಾಣಿಗೆ ದೂರು ನೀಡಿದ್ದು, 2025ರ ನವೆಂಬರ್ 10ರಂದು ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎರಡು ಸ್ವೀಕೃತಿ ಸಂಖ್ಯೆಗಳನ್ನೂ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆ ಹಾಗೂ ವಂಚನೆಯ ಜಾಲದ ಕುರಿತು ತನಿಖೆ ಮುಂದುವರಿದಿದೆ.