ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಯಲ್ಲಾಪುರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜಶೇಖರ ವಂದಲಿ ಅವರು ನೀಡಿದ ದೂರಿನ ಆಧಾರದಲ್ಲಿ ಇಡಗುಂದಿಯ ಜನತಾ ಕಾಲೋನಿ ನಿವಾಸಿಗಳಾದ ಸಂತೋಷ ರಾಮಚಂದ್ರ ನಾಯ್ಕ ಹಾಗೂ ಜಲಾಲುದ್ದಿನ್ ಅಹ್ಮದಸಾಬ ಶೇಖ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊದಲ ಆರೋಪಿ ಸಂತೋಷ ರಾಮಚಂದ್ರ ನಾಯ್ಕ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ 1ಕ್ಕೆ 80 ರೂ ನೀಡುವುದಾಗಿ ಆಮಿಷವೊಡ್ಡಿ ಓಸಿ ಮಟಕಾ ಜೂಜಾಟ ಆಡಿಸುತ್ತಿದ್ದ ಪೊಲೀಸರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಆರೋಪಿ ಸಂತೋಷನ ಬಳಿಯಿಂದ 1,120 ರೂ ನಗದು, ಓಸಿ ಮಟಕಾ ಅಂಕಿ-ಸಂಖ್ಯೆ ಬರೆದ ಒಂದು ಚೀಟಿ ಹಾಗೂ ಒಂದು ಪೆನ್ ವಶಪಡಿಸಿಕೊಳ್ಳಲಾಗಿದೆ.
ಜೂಜಾಟದಿಂದ ಸಂಗ್ರಹಿಸಿದ ಹಣ ಹಾಗೂ ಅಂಕಿ-ಸಂಖ್ಯೆ ಬರೆದ ಚೀಟಿಯನ್ನು ಎರಡನೇ ಆರೋಪಿ ಜಲಾಲುದ್ದಿನ್ ಈತನಿಗೆ ನೀಡುತ್ತಿದ್ದುದಾಗಿ ಮೊದಲ ಆರೋಪಿ ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.