Thursday, October 22, 2026
HomeLocal Newsನದಿ ತಿರುವಿಗೆ ಬ್ರೇಕ್ ಹಾಕಿ: ಬೆಂಗಳೂರಿನಲ್ಲಿ 11 ನಿರ್ಣಯ

ನದಿ ತಿರುವಿಗೆ ಬ್ರೇಕ್ ಹಾಕಿ: ಬೆಂಗಳೂರಿನಲ್ಲಿ 11 ನಿರ್ಣಯ

ಬೆಂಗಳೂರು/ಶಿರಸಿ: ಪಶ್ಚಿಮ ಘಟ್ಟದ ನದಿ ಕಣಿವೆಗಳ ಸಂರಕ್ಷಣೆ, ಉತ್ತರ ಕನ್ನಡ ಜಿಲ್ಲೆಯ ಪರಿಸರ ಸಮತೋಲನ ಮತ್ತು ಸ್ಥಳೀಯ ಜನರ ಬದುಕಿನ ರಕ್ಷಣೆಗಾಗಿ ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಧರಣಿಯಲ್ಲಿ 11 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಬೇಡ್ತಿ–ವರದಾ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸಬೇಕು ಹಾಗೂ ಎರಡೂ ನದಿ ತಿರುವು ಯೋಜನೆಗಳನ್ನು ಕೈಬಿಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗಿದೆ.

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ 22 ಪ್ರಮುಖ ನದಿಗಳ ಕಣಿವೆಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ವಿಶೇಷ ಸುಸ್ಥಿರ ಯೋಜನೆಯನ್ನು ರೂಪಿಸಬೇಕು. ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಿ ನೀರನ್ನು ಬೇರೆಡೆಗೆ ಸಾಗಿಸುವ ಪ್ರಸ್ತಾವಿತ ಯೋಜನೆಗಳು ರೈತರು, ಮೀನುಗಾರರು, ವನವಾಸಿಗಳು ಸೇರಿದಂತೆ ಲಕ್ಷಾಂತರ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.

ಬೇಡ್ತಿ–ಅಘನಾಶಿನಿ ನದಿಗಳ ದಿಕ್ಕು ಬದಲಿಸುವ ಯೋಜನೆಗಳು ನಿರೀಕ್ಷಿತ ಉದ್ದೇಶ ಸಾಧಿಸುವಲ್ಲಿ ವಿಫಲವಾಗಬಹುದು ಹಾಗೂ ನೀರಿನ ಕೊರತೆಯಿರುವ ನೀರಾವರಿ ಯೋಜನೆಗಳಾಗಿ ಉಳಿಯಬಹುದು ಎಂದು ಎಚ್ಚರಿಸಿದ್ದಾರೆ.

ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ ಎಂಬುದು ಧರಣಿಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಮುಂದಿಟ್ಟ ಪ್ರಮುಖ ವಾದ. ನದಿಗಳ ಹರಿವನ್ನು ಬದಲಿಸುವ ಪ್ರಯತ್ನದಿಂದ ಬೇಡ್ತಿ ಮತ್ತು ಅಘನಾಶಿನಿಯಂತಹ ಜೀವ ನದಿಗಳ ಅಸ್ತಿತ್ವಕ್ಕೇ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಭೂಕುಸಿತದ ಅಪಾಯ ಎದುರಿಸುತ್ತಿರುವ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಧರಣಿಯಲ್ಲಿ ವ್ಯಕ್ತಪಡಿಸಲಾಗಿದೆ.

ಕುಮಟಾ ಮತ್ತು ಅಂಕೋಲಾ ಕರಾವಳಿ ಪ್ರದೇಶಗಳಲ್ಲಿ ನದಿ ತಿರುವು ಯೋಜನೆ ಜಾರಿಯಾದರೆ ಉಪ್ಪುನೀರು ಒಳನುಗ್ಗುವ ಅಪಾಯವಿದ್ದು, ಕೃಷಿ ಮತ್ತು ಮೀನುಗಾರಿಕೆ ವಲಯಗಳಿಗೆ ಹಾನಿಯಾಗಬಹುದು ಎಂಬ ಆತಂಕವನ್ನೂ ನಿರ್ಣಯಗಳಲ್ಲಿ ದಾಖಲಿಸಲಾಗಿದೆ.

ಬೃಹತ್ ಯೋಜನೆಗಳಿಗಾಗಿ ಲಕ್ಷಾಂತರ ಗಿಡಮರಗಳನ್ನು ಕಡಿದರೆ ಅರಣ್ಯ ಸಂಪತ್ತು ನಾಶವಾಗುವುದರ ಜತೆಗೆ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುವ ಸಾಧ್ಯತೆಯಿದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶಗಳೆಂದು ರಾಜ್ಯದ ವನ್ಯಜೀವಿ ಇಲಾಖೆ 2012ರಲ್ಲಿ ಘೋಷಿಸಿರುವುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪರಿಸರದ ಧಾರಣಾ ಸಾಮರ್ಥ್ಯದ ಕುರಿತು ರಾಜ್ಯ ಸರ್ಕಾರ ಕೈಗೊಂಡ ಅಧ್ಯಯನ ವರದಿಯನ್ನೂ ಪರಿಗಣಿಸಿ, ಜಿಲ್ಲೆಯ ಪರಿಸರಕ್ಕೆ ಹಾನಿ ಉಂಟುಮಾಡುವ ಬೃಹತ್ ಯೋಜನೆಗಳಿಗೆ ಅವಕಾಶ ನೀಡಬಾರದು ಎಂಬ ಬೇಡಿಕೆ ಮುಂದಿಡಲಾಗಿದೆ.

ಮಲೆನಾಡು ಪ್ರದೇಶಕ್ಕೇ ಸಮರ್ಪಕ ಸುಸ್ಥಿರ ನೀರಾವರಿ ಯೋಜನೆಗಳ ಕೊರತೆಯಿರುವಾಗ, ಉತ್ತರ ಕನ್ನಡ ಜಿಲ್ಲೆಯ ರೈತರಿಗೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಧರಣಿಯಲ್ಲಿ ಒತ್ತಾಯಿಸಲಾಗಿದೆ.

ವಿಜ್ಞಾನಿಗಳು, ಜಿಲ್ಲೆಯ 120 ಗ್ರಾಮ ಪಂಚಾಯಿತಿಗಳು, 160 ಗ್ರಾಮೀಣ ಸಹಕಾರ ಸಂಘಗಳು, ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆ ಹಾಗೂ ಧಾರ್ಮಿಕ ಮುಖಂಡರು ನದಿ ತಿರುವು ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿರುವುದನ್ನು ಧರಣಿಯಲ್ಲಿ ಪ್ರಸ್ತಾಪಿಸಲಾಯಿತು ಎಂದು ಸಮಿತಿ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share