Friday, July 24, 2026
Join WhatsApp Group
HomeCrimeಮುರಿನಕಟ್ಟೆ; 40 ಜನ ವಶಕ್ಕೆ, 5 ಪ್ರಕರಣ ದಾಖಲು

ಮುರಿನಕಟ್ಟೆ; 40 ಜನ ವಶಕ್ಕೆ, 5 ಪ್ರಕರಣ ದಾಖಲು

ಭಟ್ಕಳ: ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಮುರಿನಕಟ್ಟೆ ವಿವಾದದ ಹಿನ್ನೆಲೆಯಲ್ಲಿ ಇದುವರೆಗೆ ಒಟ್ಟು 5 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, 40 ಮಂದಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿಯ ಹಿನ್ನೆಲೆ ಅಮ್ಮನವರ ಹೊರೆ ಇಡುವ ಮೂಲ ಮುರಿನಕಟ್ಟೆಯನ್ನು ಸ್ಥಳಾಂತರಿಸುವ ಉದ್ದೇಶದಿಂದ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿ ಹೊಸ ಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮೇ 24ರ ರಾತ್ರಿ ಕೆಲ ಕಿಡಿಗೇಡಿಗಳು ಅಕ್ರಮ ಕೂಟ ಸೇರಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಪಡಿಸಿ, ನಿರ್ಮಾಣ ಹಂತದಲ್ಲಿದ್ದ ಹೊಸ ಕಟ್ಟೆಯನ್ನು ಧ್ವಂಸಗೊಳಿಸಲು ಮುಂದಾಗಿದ್ದು, ವಿವಾದ ಸೃಷ್ಟಿಯಾಗಿತ್ತು.

ಘಟನೆ ತಡೆಯಲು ತೆರಳಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಲಾಗಿದೆ. ಅಲ್ಲದೇ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಾರ್ವಜನಿಕರೊಬ್ಬರ ಮೊಬೈಲ್ ಫೋನ್ ಕಿತ್ತುಕೊಂಡು ಹಲ್ಲೆ ಮಾಡಿರುವ ಆರೋಪವೂ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ವಿಡಿಯೋ ಪ್ರಸಾರ ಮಾಡಿದ ಆರೋಪದಡಿ ಭಟ್ಕಳದ ಆಜಾದ್ ನಗರ ನಿವಾಸಿ ಮೊತೀಬ್ ಮಹಮ್ಮದ್ ತಂದೆ ಮಹಮ್ಮದ್ ಅಶ್ರಫ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 850ಕ್ಕೂ ಅಧಿಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 4 ಪೊಲೀಸ್ ಅಧೀಕ್ಷಕರು, 10 ಡಿವೈಎಸ್‌ಪಿ, 20 ಇನ್ಸ್‌ಪೆಕ್ಟರ್, 37 ಪಿಎಸ್‌ಐ, 31 ಎಎಸ್‌ಐ, 294 ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್ ಸಿಬ್ಬಂದಿ ಸೇರಿದ್ದಾರೆ. ಜೊತೆಗೆ ಡಿಎಆರ್, ಕೆಎಸ್‌ಆರ್‌ಪಿ ಹಾಗೂ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ತುಕಡಿಗಳನ್ನೂ ನಿಯೋಜಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಾಗೂ ಪ್ರಚೋದನಾಕಾರಿ ಸಂದೇಶ ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share