Friday, July 24, 2026
Join WhatsApp Group
HomeLocal Storyʻಭಟ್ಕಳ ಚಲೋʼಗೆ ಅನಂತಕುಮಾರ ಹೆಗಡೆ ಬರ್ತಾರಾ?!

ʻಭಟ್ಕಳ ಚಲೋʼಗೆ ಅನಂತಕುಮಾರ ಹೆಗಡೆ ಬರ್ತಾರಾ?!

ಉತ್ತರ ಕನ್ನಡ ಜಿಲ್ಲೆಯ ರಾಜಕಾರಣ ಹಾಗೂ ಹಿಂದುತ್ವದ ಹೋರಾಟ ಎಂದ ತಕ್ಷಣ ನೆನಪಾಗುವ ಹೆಸರು ಮಾಜಿ ಸಂಸದ ಅನಂತಕುಮಾರ ಹೆಗಡೆ. ಭಟ್ಕಳದ ಮುರಿನಕಟ್ಟೆ ವಿಚಾರದಲ್ಲಿ ಮೇ 29ರಂದು ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಆದರೆ, ಎಲ್ಲಿಯೂ ಮಾಜಿ ಸಂಸದ, ಹಿಂದೂ ಫೈರ್‌ಬ್ರಾಂಡ್‌ ಹೆಸರು ಕೇಳಿಬರುತ್ತಿಲ್ಲ!

ಇಂತಹ ಸೂಕ್ಷ್ಮ ವಿಚಾರದಲ್ಲಿ ಹಿಂದೂ ಹುಲಿಯ ಅನುಪಸ್ಥಿತಿ ಬಿಜೆಪಿ ಅಭಿಮಾನಿಗಳಲ್ಲಿ, ಕೆಲ ಕಾರ್ಯಕರ್ತರಲ್ಲಿ ಹೊಸ ಪ್ರಶ್ನೆಗಳನ್ನು ತೆರೆದಿಟ್ಟಿವೆ. ಮುರಿನಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಮೇ 29ರಂದು ಭಟ್ಕಳದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಭಾಗವಹಿಸುತ್ತಿದ್ದಾರೆ.

ಆದರೆ ಜಿಲ್ಲೆಯ ಹಿಂದುತ್ವ ರಾಜಕಾರಣದ ಪ್ರಮುಖ ಮುಖವಾಗಿದ್ದ ಅನಂತಕುಮಾರ ಹೆಗಡೆ ಹೆಸರು ಈ ಹೋರಾಟದಲ್ಲಿ ಕಾಣಿಸಿಕೊಳ್ಳದಿರುವುದು ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅನಂತಕುಮಾರ ಹೆಗಡೆ ಅವರ ಒಂದು ಕರೆಯೇ ಜಿಲ್ಲೆಯಾದ್ಯಂತ ಸಂಘಟನಾ ಶಕ್ತಿಯನ್ನು ಚುರುಕುಗೊಳಿಸುತ್ತಿತ್ತು ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ. ಆದರೆ ಕಳೆದ ಕೆಲ ವರ್ಷಗಳಿಂದ ಅವರು ರಾಜಕೀಯ ಹಾಗೂ ಸಾರ್ವಜನಿಕ ಚಟುವಟಿಕೆಗಳಿಂದ ದೂರ ಉಳಿದಂತೆಯೇ ಕಾಣಿಸುತ್ತಿದ್ದಾರೆ.

ಇದೀಗ ಭಟ್ಕಳದಂತಹ ಸೂಕ್ಷ್ಮ ವಿಚಾರದಲ್ಲೂ ಅವರು ಕಾಣಿಸದಿರುವುದು ʻಅವರಾಗಿಯೇ ದೂರ ಉಳಿದಿದ್ದಾರೆಯೇ ಅಥವಾ ಪಕ್ಷದ ಒಳರಾಜಕೀಯದಿಂದ ಅವರನ್ನು ದೂರ ಇಡಲಾಗುತ್ತಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.

ಅನಂತಕುಮಾರ ಹೆಗಡೆ ಸಕ್ರಿಯರಾಗಿದ್ದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಹೋರಾಟಗಳಿಗೆ ಹೊರ ಜಿಲ್ಲೆಯ ನಾಯಕರ ಅವಶ್ಯಕತೆ ವಿರಳವಾಗಿತ್ತು. ಆದರೆ ಈಗ ರಾಜ್ಯಾಧ್ಯಕ್ಷರೇ ಭಟ್ಕಳ ಪ್ರತಿಭಟನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾಜಿ ಸಂಸದರನ್ನು ಯಾವ ಕಾರಣಕ್ಕೆ ದೂರ ಇಡಲಾಗುತ್ತಿದೆ ಎಂಬ ಚರ್ಚೆಗೆ ಗ್ರಾಸ ಒದಗಿಸಿದೆ.

ಹೆಗಡೆ ಅವರ ಗಟ್ಟಿತನ, ಹೋರಾಟದ ಧಾಟಿ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಸಾಮರ್ಥ್ಯ ಈಗಿನ ಯಾವ ನಾಯಕರಲ್ಲಿದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಕೆಲವರು, ಪಕ್ಷದ ಒಳಗಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಅವರನ್ನು ಹಂತ ಹಂತವಾಗಿ ಪಕ್ಕಕ್ಕೆ ಸರಿಸಲಾಗುತ್ತಿದೆ ಎಂಬರ್ಥದ ಚರ್ಚೆಯನ್ನೂ ಮಾಡುತ್ತಿದ್ದಾರೆ.

ಆದರೆ ಈ ಕುರಿತು ಬಿಜೆಪಿ ವಲಯದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸ್ಥಳೀಯ ಮುಂದಾಳುಗಳನ್ನು ಪ್ರಶ್ನಿಸಿದರೆ, ಈ ಬಗ್ಗೆ ನಮಗೆ ಮಾಹಿತಿಯಿಲ್ಲ. ನಮಗೆ ಯಾವ ಕಾರ್ಯವನ್ನು ವಹಿಸಿದ್ದಾರೋ ಅದನ್ನಷ್ಟೇ ನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ.

ಮುರಿನಕಟ್ಟೆ ವಿಚಾರವಾಗಿ ನಡೆಯಲಿರುವ ಪ್ರತಿಭಟನೆ ಅನಂತಕುಮಾರ ಹೆಗಡೆ ಅವರ ರಾಜಕೀಯ ಅನುಪಸ್ಥಿತಿಯನ್ನು ಮತ್ತಷ್ಟು ನೆನಪಿಸುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share