Friday, June 19, 2026
HomeCrimeಘಟನೆ ಒಂದು, ಪ್ರಕರಣ ಮೂರು!

ಘಟನೆ ಒಂದು, ಪ್ರಕರಣ ಮೂರು!

ಭಟ್ಕಳ: ಯುವಕ-ಯುವತಿಯೊಬ್ಬರನ್ನು ಒಳಗೊಂಡ ಘಟನೆಯೊಂದು ಭಟ್ಕಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಘಟನೆ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

ಪೊಲೀಸರ ಪ್ರಕಟಣೆಯ ಪ್ರಕಾರ, ಕಾರಗದ್ದೆಯ ಶಾಹೀದ್ ಖಾನ್ ಎಂಬಾತ ತನ್ನ ಪರಿಚಯದ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಶಿರಾಲಿ ಚಿತ್ರಾಪುರದ ಗಡಿಹಬ್ಬಕ್ಕೆ ತೆರಳುತ್ತಿದ್ದ ವೇಳೆ, ಮಾರುಕೇರಿ ಭಾಗದಲ್ಲಿ ಕಾರಿನ ಚಕ್ರ ರಸ್ತೆ ಬದಿಯ ಹೊಂಡದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಅಲ್ಲಿದ್ದ ಕೆಲವರು ಕಾರಿನಲ್ಲಿದ್ದ ಯುವತಿಯ ಕುರಿತು ಪ್ರಶ್ನಿಸಿ, ತನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಹೀದ್ ಖಾನ್ ದೂರು ನೀಡಿದ್ದಾನೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ, ಇದೇ ಘಟನೆಯ ಮತ್ತೊಂದು ಮುಖವೂ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಯುವತಿ ನೀಡಿದ ದೂರಿನಂತೆ, ಶಾಹೀದ್ ಖಾನ್ ತನ್ನೊಂದಿಗೆ ಮಾತನಾಡಬೇಕೆಂದು ಹೇಳಿ ಮನೆಯಿಂದ ಕರೆಸಿ, ತನ್ನ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಆತ ದುರುದ್ದೇಶದಿಂದಲೇ ತನ್ನನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಆರೋಪಿಸಿ ಪ್ರತಿದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಶಾಹೀದ್ ಖಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಪ್ರತಿಭಟನೆಗೂ ಕಾರಣವಾಗಿತ್ತು. ತಮ್ಮ ಸಂಘಟನೆಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಕೆಲ ಹಿಂದೂ ಸಂಘಟನೆಯ ಕಾರ್ಯಕರ್ತರು ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ಈ ವೇಳೆ ಗೋವಿಂದ ನಾಯ್ಕ ಎಂಬಾತ ಸಾರ್ವಜನಿಕ ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಮತ್ತೊಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ, ಪೊಲೀಸ್ ಅಧಿಕಾರಿಗಳನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಿ ಭಟ್ಕಳ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಪ್ರಸ್ತುತ ಮೂರು ಪ್ರಕರಣಗಳೂ ತನಿಖೆಯಲ್ಲಿದ್ದು, ಭಟ್ಕಳದಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಅಥವಾ ಪ್ರಚೋದನಕಾರಿ ಸಂದೇಶಗಳನ್ನು ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share