ಯಲ್ಲಾಪುರ: ಪಟ್ಟಣದ ಸಿಡಿಪಿಓ ಕಚೇರಿಯಲ್ಲಿ 0–6 ವರ್ಷದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಆಧಾರ್ ಕಾರ್ಡ್ ನೋಂದಣಿ ಶಿಬಿರಕ್ಕೆ ಸಂಬಂಧಿಸಿದ ಸಿಬ್ಬಂದಿ ಸಮಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸೆ.29ರಂದು ನಡೆದಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಧ್ಯಾಹ್ನ 1.30ರಿಂದ ಆಧಾರ್ ಕ್ಯಾಂಪ್ ನಡೆಸುವುದಾಗಿ ಸಮಯ ನಿಗದಿಪಡಿಸಲಾಗಿತ್ತು. ಹೀಗಾಗಿ ಹಲವು ಪಾಲಕರು ಹಸುಗೂಸುಗಳನ್ನು ಕರೆದುಕೊಂಡು ನಿಗದಿತ ಸಮಯಕ್ಕೆ ಸಿಡಿಪಿಓ ಕಚೇರಿಗೆ ಆಗಮಿಸಿದ್ದರು. ಆದರೆ, ಸಂಬಂಧಿಸಿದ ಸಿಬ್ಬಂದಿ ಸುಮಾರು ಎರಡು ಗಂಟೆ ತಡವಾಗಿ, ಮಧ್ಯಾಹ್ನ 3.30ರ ವೇಳೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸುಡುಬಿಸಿಲಿನಲ್ಲಿ ಹಸುಗೂಸುಗಳನ್ನು ಹೊತ್ತು ಕಾಯುತ್ತಿದ್ದ ಪಾಲಕರು ಪರದಾಡುವಂತಾಯಿತು. ಚಿಕ್ಕ ಮಕ್ಕಳನ್ನು ಸಂತೈಸುವುದೇ ಪಾಲಕರಿಗೆ ಕಷ್ಟವಾಗಿದ್ದು, ಸಿಬ್ಬಂದಿ ಬರುವುದಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವರು ಮಕ್ಕಳನ್ನು ಸಂಭಾಳಿಸಲಾಗದೆ ಕ್ಯಾಂಪ್‌ನಿಂದ ಮನೆಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
ಮಕ್ಕಳ ಆಧಾರ್ ನೋಂದಣಿಗಾಗಿ ಸಮಯ ನಿಗದಿಪಡಿಸಿ, ಹೇಳಿದ ಸಮಯಕ್ಕೆ ಸಿಬ್ಬಂದಿಯೇ ಹಾಜರಾಗದಿರುವುದಕ್ಕೆ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಶಿಬಿರಗಳಿಗೆ ಬರುವ ಹಸುಗೂಸುಗಳು ಮತ್ತು ಪಾಲಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕೆ ಸಿಬ್ಬಂದಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


