Saturday, May 30, 2026
HomeLocal Newsಸದಭಿರುಚಿಯ ಸಾಹಿತ್ಯ ಹೊರಹೊಮ್ಮಲಿ

ಸದಭಿರುಚಿಯ ಸಾಹಿತ್ಯ ಹೊರಹೊಮ್ಮಲಿ

ʻಭಾವಗಳ ಬ್ರಹ್ಮಾಂಡʼ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿನೇಶ ಹೊಳ್ಳ ಅಭಿಮತ

ಯಲ್ಲಾಪುರ: ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಪ್ರತಿಭೆ ಬೆಳಗಬೇಕು. ಸದಭಿರುಚಿಯ ಕವನ-ಕಥೆಗಳು ಇಂತಹ ಬರಹಗಾರರಿಂದ ಹೊರಹೊಮ್ಮಲಿ ಎಂದು ಸಹ್ಯಾದ್ರಿ ಸಂಚಯ ಟ್ರಸ್ಟ್‌ನ ಅಧ್ಯಕ್ಷ ದಿನೇಶ ಹೊಳ್ಳ ಹೇಳಿದರು.

ಅವರು ಶುಕ್ರವಾರ ಪ್ರಣವ ಪ್ರತಿಷ್ಠಾನ ಹಂಡ್ರಮನೆ, ಸಹ್ಯಾದ್ರಿ ಸಂಚಯ ಟ್ರಸ್ಟ್ ಮಂಗಳೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡ ʻಭಾವಗಳ ಬ್ರಹ್ಮಾಂಡʼ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜೀವನವನ್ನು ಎದುರಿಸುವ ಸಮಸ್ಯೆಗಳಿಗೆ ಉತ್ತರವನ್ನು ನಮ್ಮ ಸಾಹಿತ್ಯ ರಚನೆಯಲ್ಲಿ ಕಂಡುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಸಮಾಜದಲ್ಲಿ ಪ್ರತಿ ವ್ಯಕ್ತಿಯಲ್ಲಿಯೂ ವಿಶೇಷತೆ ಇದ್ದೇ ಇರುತ್ತದೆ. ಉತ್ತಮ ಪ್ರೇರಣೆ ದೊರೆತರೆ ಕೆಲವರು ಸಾಧನೆ ಮಾಡುತ್ತಾರೆ. ಆ ಸಾಧನೆಗೆ ಪುಷ್ಠಿಯಾಗಿ ನಿಲ್ಲುವವರು ಬೇಕು ಎಂದು ಹೇಳಿದರು.

ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಮಾತನಾಡಿ, ಭಾವಗಳ ಬ್ರಹ್ಮಾಂಡದಿಂದ ನಮ್ಮನ್ನು ಪ್ರೀತಿಸುವ ಬದುಕನ್ನು ಕಟ್ಟಿಕೊಳ್ಳೋಣ ಎಂದರು.

ಪ್ರಾಚಾರ್ಯ ಡಾ. ಆರ್.ಡಿ. ಜನಾರ್ಧನ ಮಾತನಾಡಿ, ಬದುಕಿನ ಘರ್ಷಣೆ ಮಧ್ಯೆ ನಮ್ಮ ಬದುಕನ್ನು ಒಳ್ಳೆಯ ಚಟುವಟಿಕೆಗಳಿಗೆ ತೆರೆದುಕೊಳ್ಳಬೇಕು. ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕು. ನಮ್ಮ ಬದುಕು ಇತರರಿಗೆ ಪ್ರೇರಣೆ ನೀಡುವಂತಿರಬೇಕು. ಅಂತಹ ಸಾಹಿತ್ಯವನ್ನು ಕೊಡುವ ಪ್ರಯತ್ನ ಮಾಡಿದರೆ ಸಮಾಜ ಸ್ವೀಕರಿಸುತ್ತದೆ, ಪರಿವರ್ತನೆ ಕಂಡುಕೊಳ್ಳುತ್ತದೆ ಎಂದರು.

ಕೃತಿಕಾರ ಶ್ರೀಕಾಂತ ವೆಂಕಟೇಶ ನಾಯ್ಕ ಕೃತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ವೇದಿಕೆಯಲ್ಲಿ ಕ.ಸಾ.ಪ ಅಧ್ಯಕ್ಷ ವಿ| ಸುಬ್ರಹ್ಮಣ್ಯ ಭಟ್ಟ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ ಕ.ಸಾ.ಪ‌ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಉಪಸ್ಥಿತರಿದ್ದರು.

ಪ್ರಣವ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳಗಿನ ಭಾವ ಹೊರಹೊಮ್ಮಿದರೆ ಉಳಿದವರಿಗೆ ಸಿಗುವ ಪ್ರೇರಣೆಯಿಂದ ಒಂದಷ್ಟು ಬದಲಾವಣೆ ಸಾಧ್ಯ. ಸತ್ಕಾರ್ಯದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗುವಂತೆ ಕರೆ ನೀಡಿದರು.

ಆಯುಷಾ ಶೇಖ್ ಪ್ರಾರ್ಥಿಸಿದರು. ಶಿಕ್ಷಕ ರಾಘವೇಂದ್ರ ಟಿ.ನಾಯ್ಕ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಯಮುನಾ ಪಿ.ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸತೀಶ ಹೆಗಡೆ ಕುಂದರಗಿ ಕಾರ್ಯಕ್ರಮ ನಿರ್ವಹಿಸಿದರು. ನಟರಾಜ್ ಗೌಡರ್ ವಂದಿಸಿದರು.

ನಂತರ ಕವಿಗೋಷ್ಠಿ ಹಾಗೂ ವಿನಾಯಕ ನಾಯ್ಕ್ ಶಿಷ್ಯರಿಂದ ಯಕ್ಷಗಾನ ನೃತ್ಯ, ನಾಟ್ಯನಿಕೇತನ ಉಮ್ಮಚಗಿ ತಂಡದ ಮಕ್ಕಳಿಂದ ಭರತನಾಟ್ಯ ಪ್ರದರ್ಶನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share