13 ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿಗಳ ನೇಮಕ
ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ತಮ್ಮ ಹೊಸ ರಾಷ್ಟ್ರೀಯ ತಂಡವನ್ನು ಸೋಮವಾರ ಪ್ರಕಟಿಸಿದ್ದಾರೆ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಅನುಭವಿ ನಾಯಕರು ಹಾಗೂ ಹೊಸ ಮುಖಗಳಿಗೆ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದ್ದು, 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ 16 ರಾಷ್ಟ್ರೀಯ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಹೊಸ ತಂಡದಲ್ಲಿ ಮಾಜಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್, ರಾಮ್ ಮಾಧವ್, ಬೈಜಯಂತ್ ಜಯ್ ಪಾಂಡ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಬೆನ್ ನರೇಂದ್ರಭಾಯಿ ದೋಷಿ, ಭಾರತಿ ಪ್ರವೀಣ್ ಪವಾರ್, ಮನ್ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಪ್ರೊ. ಎಂ. ನಾಗರಾಜ, ಪ್ರೊ. ತಾರಿಕ್ ಮನ್ಸೂರ್ ಹಾಗೂ ಮಧುಚಂದ್ರಕರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಪಟ್ಟಿಯ ಮತ್ತೊಂದು ವಿಶೇಷವೆಂದರೆ 13 ಉಪಾಧ್ಯಕ್ಷರ ಪೈಕಿ ಆರು ಮಂದಿ ಮಹಿಳೆಯರು. ಮಹಿಳಾ ನಾಯಕತ್ವಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಹೊಸ ತಂಡದ ಪ್ರಮುಖ ಅಂಶವಾಗಿ ಗಮನ ಸೆಳೆದಿದೆ.
ಇದೇ ವೇಳೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದ್ದು, ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್, ಬಿಪ್ಲಬ್ ಕುಮಾರ್ ದೇಬ್, ಗಜೇಂದ್ರ ಪಟೇಲ್, ಸತೀಶ್ ಪೂನಿಯಾ, ಹರೀಶ್ ದ್ವಿವೇದಿ ಹಾಗೂ ಸಂಜಯ್ ಭಾಟಿಯಾ ಅವರನ್ನೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಬಿ.ಎಲ್. ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪಕ್ಷವು 16 ರಾಷ್ಟ್ರೀಯ ಕಾರ್ಯದರ್ಶಿಗಳನ್ನೂ ನೇಮಿಸಿದೆ. ಈ ಪಟ್ಟಿಯಲ್ಲಿ ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಡಾ. ಭೋಲಾ ಸಿಂಗ್, ಪ್ರದೀಪ್ ವರ್ಮಾ, ಜಗದೀಶ್ ಈಶ್ವರಭಾಯಿ ಪಟೇಲ್, ಸಂದೀಪ್ ಪಾಠಕ್, ಫಾಂಗ್ನೋನ್ ಕೊನ್ಯಾಕ್, ಸಂಗೀತಾ ಯಾದವ್, ಅನಿಲ್ ಆ್ಯಂಟನಿ ಸೇರಿದಂತೆ ಹಲವು ನಾಯಕರಿದ್ದಾರೆ.
ಇನ್ನು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪಿಯೂಷ್ ಗೋಯಲ್ ರಾಷ್ಟ್ರೀಯ ಖಜಾಂಚಿಯಾಗಿ ಮುಂದುವರಿದರೆ, ರಾಜ್ಯಸಭಾ ಸದಸ್ಯ ತರುಣ್ ಚುಗ್ ಅವರಿಗೆ ಪಕ್ಷದ ಕೇಂದ್ರ ಕಚೇರಿ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಗುಜರಾತ್ನ ಸಂಸದ ಹೇಮಂಗ್ ಜೋಶಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಛತ್ತೀಸ್ಗಢದ ರೂಪ್ ಕುಮಾರಿ ಚೌಧರಿ ಅವರನ್ನು ನೇಮಿಸಲಾಗಿದೆ.
ಪಕ್ಷದ ಹೊಸ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಹೊಸ ತಂಡದಲ್ಲಿ ಸಂಘಟನಾ ಅನುಭವ, ಹೊಸ ಶಕ್ತಿ ಮತ್ತು ತಳಮಟ್ಟದ ಸಂಪರ್ಕದ ಸಮನ್ವಯವಿದೆ ಎಂದು ಹೇಳಿದ್ದಾರೆ. ಪಕ್ಷವನ್ನು ಬಲಪಡಿಸುವುದರ ಜೊತೆಗೆ ಜನಸೇವೆಯತ್ತ ಗಮನ ಹರಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಮಾರು ಆರು ತಿಂಗಳ ಬಳಿಕ ಈ ಹೊಸ ತಂಡ ಪ್ರಕಟವಾಗಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಪುನರ್ವ್ಯವಸ್ಥೆಗೊಳಿಸುವ ಮಹತ್ವದ ಹೆಜ್ಜೆಯಾಗಿ ಈ ನೇಮಕಾತಿಗಳನ್ನು ರಾಜಕೀಯ ವಲಯದಲ್ಲಿ ನೋಡಲಾಗುತ್ತಿದೆ.