ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿ ಸೋಮವಾರ ಮುಂಜಾನೆ ಹೋಂಸ್ಟೇ ಆವರಣಕ್ಕೆ ಕಪ್ಪು ಚಿರತೆಯೊಂದು ನುಗ್ಗಿ ದುಬಾರಿ ಜರ್ಮನ್ ಶೆಫರ್ಡ್ ನಾಯಿಯನ್ನು ಕೊಂದು ಹಾಕಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಹಸನ್ಮಾಳದಲ್ಲಿರುವ ವೈಲ್ಡರ್‌ನೆಸ್ಟ್ ಜಂಗಲ್ ಹೋಂಸ್ಟೇ ಆವರಣದಲ್ಲಿ ಘಟನೆ ನಡೆದಿದ್ದು, ಹೋಂಸ್ಟೇ ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ಕರೀಂ ಘೌಸ್ ಖತೀಬ್ ಅವರದ್ದಾಗಿದೆ. ಸರ್ಬಿಯಾದಿಂದ ತರಿಸಲಾಗಿತ್ತು ಎನ್ನಲಾದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಕಪ್ಪು ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ ಎನ್ನಲಾಗಿದೆ. ಚಿರತೆ ಹೋಂಸ್ಟೇ ಆವರಣಕ್ಕೆ ಪ್ರವೇಶಿಸಿ ನಾಯಿಯ ಮೇಲೆ ದಾಳಿ ನಡೆಸಿದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಹಸನ್ಮಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ಕಪ್ಪು ಚಿರತೆ ಮತ್ತೆಮತ್ತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಗತಿಪರ ಯುವ ರೈತ ಜ್ಯೋತಿಬಾ ಪಾಟೀಲ್ ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವಿನ ಮೇಲೆಯೂ ಇದೇ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು ಎನ್ನಲಾಗಿದೆ.
ನಿರಂತರವಾಗಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಹಸನ್ಮಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಂಜರಗಳನ್ನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯುವ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದರೊಂದಿಗೆ ಗ್ರಾಮಸ್ಥರಿಗೆ ಚಿರತೆ ಇತ್ಯಾದಿ ಕಾಡು ಪ್ರಾಣಿಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಣ್ಯ ಇಲಾಖೆ ಜಾಗೃತಿ ಮೂಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.