Saturday, June 13, 2026
HomeLocal Newsಬಡಾಯಿ ಕೊಚ್ಚುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು: ರಾಮು ನಾಯ್ಕ ಟೀಕೆ

ಬಡಾಯಿ ಕೊಚ್ಚುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು: ರಾಮು ನಾಯ್ಕ ಟೀಕೆ

ಯಲ್ಲಾಪುರ: ಕಾಂಗ್ರೆಸ್‌ನ ನೂತನ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆಗಳು ವಾಸ್ತವಾಂಶಗಳಿಗೆ ದೂರವಾಗಿದ್ದು, ರಾಜಕೀಯ ದ್ವಂದ್ವ ನಿಲುವನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ʻನಮ್ಮಲ್ಲಿ ಕ್ರಿಮಿನಲ್‌ಗಳು ಹಾಗೂ ಜೈಲು ವಾಸ ಅನುಭವಿಸಿದವರನ್ನು ಅಧ್ಯಕ್ಷರನ್ನಾಗಿ ಮಾಡುವ ಪರಂಪರೆ ಇಲ್ಲ, ಅದು ಬಿಜೆಪಿಯಲ್ಲಿ ಮಾತ್ರ ಇದೆʼ ಎಂಬ ಹರಿಪ್ರಸಾದ್ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಹಿಂದಿನ ರಾಜ್ಯಾಧ್ಯಕ್ಷರೂ, ಹಾಲಿ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹಿನ್ನೆಲೆಯನ್ನು ನೆನಪಿಸಿಕೊಳ್ಳುವಂತೆ ಹರಿಪ್ರಸಾದ್ ಅವರಿಗೆ ಸಲಹೆ ನೀಡಿರುವ ರಾಮು ನಾಯ್ಕ, ತಮ್ಮದೇ ಪಕ್ಷದ ನಾಯಕರ ಬಗ್ಗೆ ಅರಿವಿಲ್ಲದೇ ಬಿಜೆಪಿ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಮಾತನಾಡಿರುವ ಹರಿಪ್ರಸಾದ್ ಅವರಿಗೆ ಪ್ರತಿಕ್ರಿಯಿಸಿದ ಅವರು, 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರು ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದು, ನಂತರ ಮೂರು ಬಾರಿ ಗುಜರಾತ್ ವಿಧಾನಸಭೆಗೆ ಹಾಗೂ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಅದೇ ವೇಳೆ ಕಾಂಗ್ರೆಸ್‌ನ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ ರಾಜಕೀಯ ಜೀವನದಲ್ಲಿ ನೇರ ಜನಪ್ರತಿನಿಧಿ ಚುನಾವಣೆಯಲ್ಲಿ ಗೆದ್ದ ಉದಾಹರಣೆ ಇಲ್ಲದಿದ್ದರೂ, ಹತ್ತು ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದರು ಎಂಬುದನ್ನು ಮರೆಯಬಾರದು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ಜೈರಾಮ್ ರಮೇಶ್ ಸೇರಿದಂತೆ ಅನೇಕ ನಾಯಕರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೂ, ಎಲ್ಲರೂ ನೇರ ಚುನಾವಣೆಯಲ್ಲಿ ಗೆದ್ದವರಲ್ಲ ಎಂಬುದನ್ನು ರಾಮು ನಾಯ್ಕ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಬಿ.ಕೆ. ಹರಿಪ್ರಸಾದ್ ಅವರನ್ನೇ ಉಲ್ಲೇಖಿಸಿ, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ನೇರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಉದಾಹರಣೆ ಇದೆಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಆರ್‌ಎಸ್‌ಎಸ್‌ ಕುರಿತು ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮು ನಾಯ್ಕ, “ಸಂಘದಲ್ಲಿ ಹುದ್ದೆಗಳು ಚುನಾವಣೆಯ ಮೂಲಕವಲ್ಲ, ಅರ್ಹತೆಯ ಆಧಾರದ ಮೇಲೆ ನಿರ್ಧಾರವಾಗುತ್ತವೆ. ಸಂಘದಲ್ಲಿ ಬಣ ರಾಜಕೀಯ ಅಥವಾ ಚುನಾವಣಾ ಸ್ಪರ್ಧೆಗಳಿಲ್ಲ. ಇದೇ ಕಾರಣದಿಂದ ಸಂಘಟನೆ ಶತಮಾನ ಪೂರೈಸಿದರೂ ಬಲಿಷ್ಠವಾಗಿ ಬೆಳೆಯುತ್ತಿದೆ” ಎಂದು ಹೇಳಿದ್ದಾರೆ.

ವಾಸ್ತವಾಂಶಗಳನ್ನು ಅರಿಯದೇ ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷರು ತಪ್ಪಿಸಿಕೊಳ್ಳಬೇಕು ಎಂದು ರಾಮು ನಾಯ್ಕ ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share