Thursday, July 23, 2026
Join WhatsApp Group
HomeStateBLOಗಳು ಕಡ್ಡಾಯವಾಗಿ ಮನೆ ಮನೆಗೆ ಬರ್ಬೇಕ್!

BLOಗಳು ಕಡ್ಡಾಯವಾಗಿ ಮನೆ ಮನೆಗೆ ಬರ್ಬೇಕ್!

ಮತದಾರರ ಫಾರಂ ವಿತರಣೆಗೆ ಚುನಾವಣಾ ಆಯೋಗದ ಖಡಕ್ ಸೂಚನೆ

ಬೆಂಗಳೂರು: ಮತದಾರರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯ ದೂರುಗಳು ಕೇಳಿಬಂದ ಬೆನ್ನಲ್ಲೇ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಬೂತ್ ಲೆವೆಲ್ ಅಧಿಕಾರಿಗಳು (BLO) ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ಎಣಿಕೆ (Enumeration) ಫಾರಂ ವಿತರಿಸಬೇಕು ಎಂದು ಆದೇಶಿಸಲಾಗಿದೆ.

ರಾಜ್ಯದ ಕೆಲವು ಭಾಗಗಳಲ್ಲಿ BLOಗಳು ಮನೆಗಳಿಗೆ ಭೇಟಿ ನೀಡದೇ ಕಚೇರಿ ಅಥವಾ ನಿಗದಿತ ಸ್ಥಳಗಳಿಂದಲೇ ಫಾರಂ ಹಂಚುತ್ತಿದ್ದಾರೆ ಎಂಬ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಖಡಕ್ ನಿರ್ದೇಶನ ಹೊರಡಿಸಿದ್ದು, ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜೂನ್ 30ರಿಂದ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನ ಜುಲೈ 29ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರಾಜ್ಯದ ಸುಮಾರು 5.5 ಕೋಟಿ ಮತದಾರರನ್ನು ತಲುಪುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸುಮಾರು 59 ಸಾವಿರಕ್ಕೂ ಹೆಚ್ಚು BLOಗಳು ರಾಜ್ಯಾದ್ಯಂತ ನಿಯೋಜನೆಗೊಂಡಿದ್ದಾರೆ.

BLOಗಳು ಪ್ರತಿ ಮನೆಗೂ ತೆರಳಿ ಮತದಾರರಿಗೆ ಪೂರ್ವಭರ್ತಿ (pre-filled) ಮಾಡಿದ ಎಣಿಕೆ ನಮೂನೆಗಳನ್ನು ನೀಡಲಿದ್ದು, ನಂತರ ಭರ್ತಿ ಮಾಡಿದ ಫಾರಂಗಳನ್ನು ಸಂಗ್ರಹಿಸಲಿದ್ದಾರೆ. ಮನೆಗೆ ಭೇಟಿ ನೀಡಿದ ಗುರುತಾಗಿ ವಿಶೇಷ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. ಮನೆಗೆ ಯಾರೂ ಇಲ್ಲದಿದ್ದರೆ ಸಂಪರ್ಕ ವಿವರಗಳೊಂದಿಗೆ ಫಾರಂ ಬಿಟ್ಟು ಹೋಗುವ ವ್ಯವಸ್ಥೆಯೂ ಇದೆ.

ಈ ವಿಶೇಷ ಪರಿಷ್ಕರಣೆ ಅಭಿಯಾನದ ಮುಖ್ಯ ಉದ್ದೇಶ ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು, ಮೃತಪಟ್ಟವರು ಅಥವಾ ಸ್ಥಳಾಂತರಗೊಂಡವರ ಹೆಸರನ್ನು ಗುರುತಿಸುವುದು, ಹೊಸ ಅರ್ಹ ಮತದಾರರನ್ನು ಸೇರಿಸುವುದು ಹಾಗೂ ವಿಳಾಸ, ಹೆಸರು ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ಮಾಡುವುದು. ಇದರಿಂದ ಮತದಾರರ ಪಟ್ಟಿ ಇನ್ನಷ್ಟು ನಿಖರವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

BLO ಮನೆಗೆ ಬಂದಾಗ ಮತದಾರರು ಅಗತ್ಯ ಮಾಹಿತಿಯನ್ನು ಪರಿಶೀಲಿಸಿ, ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಹಿಂತಿರುಗಿಸಬೇಕು. ಯಾರಾದರೂ ಮನೆಗೆ ಬಾರದಿದ್ದರೆ ಸಂಬಂಧಿತ BLO ಅಥವಾ ಚುನಾವಣಾ ನೋಂದಣಿ ಅಧಿಕಾರಿಯನ್ನು ಸಂಪರ್ಕಿಸುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share