ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರ್ವೆ, ನಗೆ ಕೋವೆ, ಬೇಳೂರು ಹಾಗೂ ನೈತಿ ಸವಾರ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಬಿಎಸ್‌ಎನ್‌ಎಲ್ (BSNL) ಮೊಬೈಲ್ ನೆಟ್‌ವರ್ಕ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಈ ಭಾಗದಲ್ಲಿ ಹೊಸ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಹಳೆಯ ಮೊಬೈಲ್‌ಗಳಿಗೆ ನೆಟ್‌ವರ್ಕ್ ದೊರೆಯದೆ, 5g ಬೆಂಬಲಿಸುವ ಮೊಬೈಲ್‌ಗಳಿಗೆ ಮಾತ್ರ ಸಂಪರ್ಕ ಲಭ್ಯವಾಗಲಿದೆ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಗ್ರಾಮಸ್ಥರಲ್ಲಿ ಬಹುತೇಕರು ಹೊಸ 5ಜಿ ಹಾಗೂ 4ಜಿ ಮೊಬೈಲ್‌ಗಳನ್ನು ಖರೀದಿಸಿದ್ದರು.
ಆದರೆ ಕಳೆದ 15 ದಿನಗಳಿಂದ ಯಾವ ಮೊಬೈಲ್ಗೂ ನೆಟ್‌ವರ್ಕ್ ಸರಿಯಾಗಿ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಟವರ್‌ಗೆ ವಿದ್ಯುತ್ ಸರಬರಾಜು ಇಲ್ಲದಿರುವುದು ಹಾಗೂ ಸೌರಶಕ್ತಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ನೆಟ್‌ವರ್ಕ್ ವ್ಯತ್ಯಯ ಉಂಟಾಗಿದೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಬಿಎಸ್‌ಎನ್‌ಎಲ್ ಟವರ್‌ನ ತಾಂತ್ರಿಕ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿ, ನಿರಂತರ ಮೊಬೈಲ್ ನೆಟ್‌ವರ್ಕ್ ಸೇವೆ ಒದಗಿಸುವಂತೆ ಮನವಿ ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದರಿಂದ ದೈನಂದಿನ ವ್ಯವಹಾರ, ಬ್ಯಾಂಕಿಂಗ್ ಹಾಗೂ ತುರ್ತು ಸೇವೆಗಳಿಗೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಗಮನ ಸೆಳೆದಿದ್ದಾರೆ.