ಕುಮಟಾ: ಇಲ್ಲಿನ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಗಾಯನ, ಭರತನಾಟ್ಯ, ಭಾಷಣ, ವಾದ್ಯ ಸಂಗೀತ, ಕಿರುನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.
ಸ್ವಸ್ತಿ ಭಟ್ಟ ಸ್ವಾಗತಿಸಿದರು. ಪ್ರಜ್ಞಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ ಭಟ್ಟ ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಇಂತಹ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಅವರ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಕಿರಣ್ ಭಟ್ಟ ಹುತ್ಗಾರ್, ಆಡಳಿತಾಧಿಕಾರಿ ಶಶಾಂಕ್ ಶಾಸ್ತ್ರಿ, ಉಪಪ್ರಾಚಾರ್ಯೆ ರಮ್ಯಾ ಸಭಾಹಿತ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿ ಅಭಿನಂದಿಸಿದರು.