ಯಲ್ಲಾಪುರ: ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸುವ ಉದ್ದೇಶದಿಂದ ಯಲ್ಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ರಾಜಶೇಖರ ವಂದಲಿ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಮಾದಕ ವಸ್ತುಗಳ ಸೇವನೆ, ಸಾಗಾಣಿಕೆ ಹಾಗೂ ಬಳಕೆಯಿಂದ ಉಂಟಾಗುವ ಅಪಾಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, “ಮಾದಕ ವಸ್ತುಗಳು ಜೀವನಕ್ಕೆ ಮಾರಕ. ಸಣ್ಣ ಪ್ರಮಾಣದಲ್ಲಿ ಆರಂಭವಾಗುವ ದುಶ್ಚಟಗಳು ಕ್ರಮೇಣ ದೊಡ್ಡ ವ್ಯಸನವಾಗಿ ಬೆಳೆದು ಇಡೀ ಬದುಕನ್ನೇ ಹಾಳು ಮಾಡುತ್ತವೆ” ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಮಾದಕ ವಸ್ತುಗಳ ಮಾರಾಟ, ಸಾಗಾಟ ಅಥವಾ ಸೇವನೆ ಬಗ್ಗೆ ಎಲ್ಲಿಯಾದರೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದಕ ದ್ರವ್ಯಗಳ ಸೇವನೆ, ಸಾಗಾಣಿಕೆ ಹಾಗೂ ಬಳಕೆ ಕುರಿತಂತೆ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಶ್ವಿನಿ ಗಾಂವ್ಕರ್ ಪ್ರಥಮ ಬಹುಮಾನ ಪಡೆದರೆ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಐಶ್ವರ್ಯ ನಾಯ್ಕ ಹಾಗೂ ಕಾವ್ಯ ಪಟಗಾರ ದ್ವಿತೀಯ ಬಹುಮಾನವನ್ನು ಹಂಚಿಕೊಂಡರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಾನ್ಯ ಬಾಂದೇಕರ್ ತೃತೀಯ ಬಹುಮಾನ ಪಡೆದರು.
ವಿಜೇತ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪೊಲೀಸರು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಹಾಗೂ ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.