Friday, July 24, 2026
Join WhatsApp Group
HomeLocal Newsಶಿರಾಲಿ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

ಶಿರಾಲಿ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಸಚಿವ ಮಂಕಾಳ ವೈದ್ಯ

ಕಾರವಾರ: ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶುಕ್ರವಾರ ಪರಿಹಾರದ ಚೆಕ್ ವಿತರಿಸಿದರು.

ಮೃತರ ಮನೆಗಳಿಗೆ ತೆರಳಿ ವಾರಸುದಾರರಿಗೆ ತಲಾ ರೂ.16.50 ಲಕ್ಷ ಪರಿಹಾರದ ಚೆಕ್ ನೀಡಿದ ಸಚಿವರು ಮಾತನಾಡಿ, “ಕಪ್ಪೆಚಿಪ್ಪು ದುರಂತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ರಾಜ್ಯ ಸರ್ಕಾರದಿಂದ ರೂ.5 ಲಕ್ಷ ಪರಿಹಾರ ಘೋಷಿಸಲಾಗಿದೆ. ಜೊತೆಗೆ ಮೀನುಗಾರಿಕೆ ಇಲಾಖೆಯಿಂದ ತಲಾ ರೂ.10 ಲಕ್ಷದಂತೆ ಒಟ್ಟು ರೂ.1.10 ಕೋಟಿ, ಜನತಾ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ರೂ.50 ಸಾವಿರ ಹಾಗೂ ವೈಯಕ್ತಿಕವಾಗಿ ಪ್ರತೀ ಕುಟುಂಬಕ್ಕೂ ರೂ.1 ಲಕ್ಷ ಸಹಾಯಧನ ನೀಡಲಾಗಿದೆ” ಎಂದು ತಿಳಿಸಿದರು.

ಮನೆ ಇಲ್ಲದ ಕುಟುಂಬಗಳಿಗೆ ವೈಯಕ್ತಿಕವಾಗಿ ರೂ.5 ಲಕ್ಷ ನೆರವು ನೀಡಿರುವುದಾಗಿ ಹೇಳಿದ ಅವರು, ಸರ್ಕಾರದ ವತಿಯಿಂದಲೂ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಭಾಗದಲ್ಲಿ ನದಿಯಿಂದ ಕಪ್ಪೆಚಿಪ್ಪು ತೆಗೆಯುವುದು ಪಾರಂಪರಿಕ ವೃತ್ತಿಯಾಗಿದ್ದು, ಕಲ್ಲಿನ ಮೇಲಿನ ಚಿಪ್ಪುಗಳನ್ನು ತೆಗೆಯುವ ವೇಳೆ ಒಬ್ಬರು ಆಳವಾದ ನೀರಿನಲ್ಲಿ ಮುಳುಗಿದಾಗ, ಉಳಿದವರು ರಕ್ಷಿಸಲು ಹೋಗಿ ಸರಣಿ ದುರಂತ ಸಂಭವಿಸಿದೆ ಎಂದು ಸಚಿವರು ವಿವರಿಸಿದರು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಿಲ್ಲದೆ ಯಾರೂ ನದಿಗೆ ಇಳಿಯಬಾರದು ಎಂಬ ಸೂಚನೆ ನೀಡಲಾಗಿದೆ ಎಂದರು.

ಮೃತರ ಕುಟುಂಬದಲ್ಲಿನ ಒಬ್ಬರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ ಸಚಿವರು, ಮೃತ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಈ ಭಾಗದ ಶಾಸಕನಾಗಿ ನಾನು ಹೊರುತ್ತೇನೆ. ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜನತಾ ಕೋ-ಆಪರೇಟಿವ್ ಬ್ಯಾಂಕ್ ಪದಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share