ಕ್ರಷರ್‌ಲ್ಲಿ ಕಬ್ಬಿಣದ ಸಾಮಗ್ರಿ, ಬೈಕ್ ಕಳವು; ಇಬ್ಬರು ಕಾರ್ಮಿಕರ ವಿರುದ್ಧ ಪ್ರಕರಣ
ಕಾರವಾರ: ಸ್ಟೋನ್ ಕ್ರಷರ್ ಆವರಣದಲ್ಲಿ ಇಟ್ಟಿದ್ದ ಕಬ್ಬಿಣದ ಸಾಮಗ್ರಿಗಳು ಹಾಗೂ ಶೆಡ್‌ನಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಇಬ್ಬರು ಕಾರ್ಮಿಕರ ವಿರುದ್ಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ತಾಲೂಕಿನ ಮಾಜಾಳಿ, ನೆಚಕನ್‌ಬಾಗ ನಿವಾಸಿ, ಸ್ಟೋನ್ ಕ್ರಷರ್ ವ್ಯವಹಾರ ನಡೆಸುತ್ತಿರುವ ನಾಮದೇವ ಮುಕುಂದ ಮೇಥಾ ಈ ಕುರಿತು ದೂರು ನೀಡಿದ್ದಾರೆ.
ಏಪ್ರಿಲ್ 18ರಂದು ಮಧ್ಯಾಹ್ನ ಕ್ರಷರ್‌ನ ಯಂತ್ರವೊಂದು ಸರ್ವಿಸ್‌ಗೆ ಬಂದಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಕಬ್ಬಿಣದ ಸಾಮಗ್ರಿಗಳನ್ನು ಕ್ರಷರ್ ಆವರಣದಲ್ಲಿ ಇಟ್ಟು ನಾಮದೇವ ಮೇಥಾ ಮನೆಗೆ ತೆರಳಿದ್ದರು. ಈ ವೇಳೆ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಖಂಡ್ವಾ ನಿವಾಸಿಗಳಾದ ಸವಾನ್ ಗಂಗ್ವಾಲ್ (30) ಹಾಗೂ ಸುಮ್ಲಾ ಅಲಿಯಾಸ್ ಸೋಹನ್ ಸತ್ಸೆ (28) ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ.
ಏಪ್ರಿಲ್ 19ರಂದು ಸಂಜೆ 5 ಗಂಟೆಗೆ ಕ್ರಷರ್‌ಗೆ ಬಂದು ನೋಡಿದಾಗ ಕಬ್ಬಿಣದ ಸಾಮಗ್ರಿಗಳು ಕಾಣೆಯಾಗಿದ್ದವು. ಅಲ್ಲದೇ, ನಾಮದೇವ ಮೇಥಾ ಸಹೋದರ ಸಂತೋಷ್ ಮೇಥಾ ಅವರ ಹೆಸರಿನಲ್ಲಿದ್ದ ಮೋಟಾರ್ ಸೈಕಲ್ ಕೂಡ ಶೆಡ್‌ನಲ್ಲಿ ಇರಲಿಲ್ಲ. ಇದೇ ವೇಳೆ ಸವಾನ್ ಗಂಗ್ವಾಲ್ ಹಾಗೂ ಸುಮ್ಲಾ ಅಲಿಯಾಸ್ ಸೋಹನ್ ಸತ್ಸೆ ಕೂಡ ಸ್ಥಳದಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏಪ್ರಿಲ್ 18ರ ಮಧ್ಯಾಹ್ನ 2 ಗಂಟೆಯಿಂದ ಏಪ್ರಿಲ್ 19ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಇಬ್ಬರೂ ಸೇರಿಕೊಂಡು ಕಬ್ಬಿಣದ ಸಾಮಗ್ರಿಗಳು ಹಾಗೂ ಮೋಟಾರ್ ಸೈಕಲ್ ಕಳವು ಮಾಡಿಕೊಂಡು ಹೋಗಿರುವುದಾಗಿ ನಾಮದೇವ ಮೇಥಾ ಆರೋಪಿಸಿದ್ದಾರೆ.
ಇಬ್ಬರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಅವರು ಮರಳಿ ಬಂದು ಕಳವು ಮಾಡಿರುವ ವಸ್ತುಗಳನ್ನು ಹಿಂದಿರುಗಿಸಬಹುದು ಎಂಬ ನಿರೀಕ್ಷೆಯಿಂದ ತಕ್ಷಣ ದೂರು ನೀಡಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.