Monday, September 7, 2026
Join WhatsApp Group
HomeLocal Newsಕರಾವಳಿಯಲ್ಲಿ ಉದ್ಯೋಗಾವಕಾಶಗಳಿಗೆ ಹೊಸ ದಾರಿ

ಕರಾವಳಿಯಲ್ಲಿ ಉದ್ಯೋಗಾವಕಾಶಗಳಿಗೆ ಹೊಸ ದಾರಿ

ಶಿರಸಿ: ಉತ್ತರ ಕನ್ನಡದ ಕರಾವಳಿ ಹಾಗೂ ಪ್ರವಾಸೋದ್ಯಮದ ಪ್ರಮುಖ ತಾಣಗಳ ಸುತ್ತ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಪ್ರಮೋದ್ ಎಚ್.ಎನ್. ಹೇಳಿದರು.

ಶಿರಸಿಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಚಯಾತ್ಮಕ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸೋದ್ಯಮ ಹಾಗೂ ಸಂಬಂಧಿತ ಆರ್ಥಿಕ ಚಟುವಟಿಕೆಗಳು ಬೆಳೆಯುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಅವಕಾಶಗಳು ಹೆಚ್ಚಾಗುತ್ತಿವೆ. ಇದರಿಂದ ಜನರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೈಭವ್ ಮಾತನಾಡಿ, ಕರಾವಳಿ ಪ್ರದೇಶದ ಆರ್ಥಿಕತೆಯಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಜಲಚರ ಹಾಗೂ ಭೂಚರ ಜೀವವೈವಿಧ್ಯ ಸಂರಕ್ಷಣೆಯ ಜತೆಗೆ ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ ಎಂದರು.

ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕರಾವಳಿ ಸಮುದಾಯಗಳ ಆರ್ಥಿಕ ಪ್ರಗತಿಗೆ ನೆರವಾಗುವುದರ ಜತೆಗೆ ಜಲಜೀವಿಗಳ ಸಂರಕ್ಷಣೆಯನ್ನೂ ಮಾಡಬಹುದು ಎಂದು ಹೇಳಿದರು.

ಪ್ರಾಧ್ಯಾಪಕ ಡಾ. ಸಿದ್ದರಾಮ ಹೆಚ್.ಎಂ. ಮಾತನಾಡಿ, ಕರಾವಳಿ ಪ್ರದೇಶದಲ್ಲಿ ನಗರೀಕರಣ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ಅಗತ್ಯ ಎಂದರು.

ಕರಾವಳಿ ಪ್ರದೇಶಗಳು ಪ್ರಕೃತಿ ಸಂಪತ್ತು, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ವ್ಯಾಪಾರದ ಪ್ರಮುಖ ಕೇಂದ್ರಗಳಾಗಿವೆ. ಆದರೆ ನಗರೀಕರಣದಿಂದ ಪರಿಸರ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೂ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಸುಸ್ಥಿರ ಯೋಜನೆಗಳು, ಸಮಗ್ರ ಪರಿಸರ ಸಂರಕ್ಷಣಾ ಕ್ರಮಗಳು ಹಾಗೂ ಸ್ಥಳೀಯರ ಪಾಲ್ಗೊಳ್ಳುವಿಕೆಯ ಮೂಲಕ ಕರಾವಳಿಯ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು ಎಂದು ಹೇಳಿದರು.

ಉಪಪ್ರಾಂಶುಪಾಲ ಪೀಟರ್ ಡಯಾಸ್ ಮಾತನಾಡಿ, ಹೊಸ ತಂತ್ರಜ್ಞಾನ ಹಾಗೂ ಸಂಶೋಧನೆಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆಯೂ ಅಗತ್ಯವಾಗಿದೆ. ಪರಿಸರ ಸಂರಕ್ಷಣೆ, ಸುಸ್ಥಿರ ಮೀನುಗಾರಿಕೆ ಮತ್ತು ಆರ್ಥಿಕ ಸ್ವಾವಲಂಬನೆ ಪರಸ್ಪರ ಸಂಬಂಧ ಹೊಂದಿವೆ ಎಂದು ತಿಳಿಸಿದರು.

ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಕೇಂದ್ರದ ಪ್ರತಿನಿಧಿ ಡಾ. ಸಿದ್ದರಾಮ್ ಎಚ್.ಎಂ. ಅವರು ಐದು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ನೌಕರರು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ, ಜಿಲ್ಲಾ ತರಬೇತಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಶಿರಸಿ ಜಿಲ್ಲಾ ತರಬೇತಿ ಸಂಸ್ಥೆಯ ಸಂಯೋಜಕ ಮಹಾಂತೇಶ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share