ಅಂಕೋಲಾ: ಲಾರಿಯನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕ್ ಎದುರಿನಿಂದ ಬಂದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಾಂಡೇಲಿಯ 22 ವರ್ಷದ ಯುವಕ ಮೃತಪಟ್ಟಿದ್ದು, ಬೈಕ್‌ನಲ್ಲಿದ್ದ ಇನ್ನೋರ್ವ ಯುವಕ ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಕೋಟೇಪಾಲ ಬಳಿ ನಡೆದಿದೆ.
ಮೃತರನ್ನು ದಾಂಡೇಲಿ ನಿವಾಸಿ ಸಂಜಯ ರಾಜು ಬೋಸಲೆ (22) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಅದೇ ಪ್ರದೇಶದ ನಿವಾಸಿ ಆಕಾಶ ದಾಂಡೇಲಪ್ಪ ಸಬಾನಿ (20).
ಗುರುವಾರ ಬೆಳಗ್ಗೆ ಸುಮಾರು 9.20ರ ವೇಳೆಗೆ ಸಂಜಯ ಅವರು ಬೈಕ್‌ನಲ್ಲಿ ಆಕಾಶ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಯಲ್ಲಾಪುರದಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ತೆರಳುತ್ತಿದ್ದರು.
ಸುಂಕಸಾಳ ಕೋಟೇಪಾಲ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯೊಂದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ ವೇಳೆ, ಎದುರಿನಿಂದ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕೆಎಲ್-86 ಡಿ-7557 ಸಂಖ್ಯೆಯ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಬೈಕ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು, ಆಕಾಶ ಅವರ ಬಲಕಾಲಿನ ಮಂಡಿ ಸಮೀಪ ಗಾಯವಾಗಿದೆ. ಬೈಕ್ ಸವಾರ ಸಂಜಯ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.