ಶಿರಸಿ: ಚುನಾವಣಾ ಆಯೋಗವು 24 ವರ್ಷಗಳ ಬಳಿಕ ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಕೈಗೊಂಡಿದ್ದು, ಇದರ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ನಡೆಯುವ ಸಂವಿಧಾನಬದ್ಧ ಕಾರ್ಯವಾಗಿದ್ದು, ಸುಪ್ರೀಂ ಕೋರ್ಟ್ ಸಹ ಇದಕ್ಕೆ ಅವಕಾಶ ನೀಡಿದೆ. ಆದರೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರು ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿರುವುದು ಅವರ ತಪ್ಪು ತಿಳುವಳಿಕೆಯನ್ನು ತೋರಿಸುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆ ಬಳಿಕ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ ಎಂಬ ಕಾಂಗ್ರೆಸ್ ವಕ್ತಾರರ ಹೇಳಿಕೆಯೂ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಡೆಸಲಿದ್ದು, ಅರ್ಹ ಮತದಾರರನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ. ಪಡಿತರ ಚೀಟಿ ವಿತರಣೆ ಹಾಗೂ ಅದರ ನಿರ್ವಹಣೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯ ಎಂಬುದನ್ನು ಕಾಂಗ್ರೆಸ್ ಗಮನಿಸಬೇಕು.
ರಾಜ್ಯದಲ್ಲಿ ಬರ ಹಾಗೂ ಅತಿವೃಷ್ಟಿ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಒದಗಿಸುವ ಬದಲು ಕಾಂಗ್ರೆಸ್ ಸರ್ಕಾರ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುವುದರಲ್ಲಿ ತೊಡಗಿದೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲೂ ಸರ್ಕಾರ ಗೊಂದಲದಲ್ಲಿರುವುದು ಜನರಿಗೆ ಗೋಚರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟತೆ ನೀಡಬೇಕು. ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅನ್ನಭಾಗ್ಯ ಯೋಜನೆಯ ಅಸಮರ್ಪಕ ನಿರ್ವಹಣೆ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಂತ್ರಿಸ್ಥಾನ ಪಡೆಯುವ ಉದ್ದೇಶದಿಂದ ಬಿಜೆಪಿ ವಿರುದ್ಧ ಅನಗತ್ಯ ಆರೋಪ ಮಾಡುವ ಬದಲು ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದು ಸದಾನಂದ ಭಟ್ ತಿಳಿಸಿದ್ದಾರೆ.