Friday, July 24, 2026
Join WhatsApp Group
HomeCrimeಇಲ್ಲದ ಅರೆಸ್ಟ್‌ಗೆ ಗುರಿಯಾದ ಉಮ್ಮಚಗಿಯ ಅಜ್ಜ ಕಳೆದುಕೊಂಡಿದ್ದು 1.74 ಕೋಟಿ!

ಇಲ್ಲದ ಅರೆಸ್ಟ್‌ಗೆ ಗುರಿಯಾದ ಉಮ್ಮಚಗಿಯ ಅಜ್ಜ ಕಳೆದುಕೊಂಡಿದ್ದು 1.74 ಕೋಟಿ!

ಕಾರವಾರ/ಯಲ್ಲಾಪುರ: “ನಿಮ್ಮ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆ ತೆರೆದು ಭಯೋತ್ಪಾದಕರು ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ… ನಿಮ್ಮ ವಿರುದ್ಧ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ… ಈಗಲೇ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ಜಮಾ ಮಾಡದಿದ್ದರೆ ಬಂಧಿಸಲಾಗುತ್ತದೆ…”

ಇಂತಹ ಬೆದರಿಕೆಯ ಮಾತುಗಳನ್ನು ನಂಬಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಹಿರಿಯ ನಾಗರಿಕರೊಬ್ಬರು 1.74 ಕೋಟಿ ರೂ ಹಣವನ್ನು ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?

ಉಮ್ಮಚಗಿಯ ಹೈಸ್ಕೂಲ್‌ ಎದುರಿನ ನಿವಾಸಿ, 69 ವರ್ಷದ ವೃದ್ಧರೊಬ್ಬರು ಎಲ್‌ಐಸಿ ಏಜೆಂಟ್ ಆಗಿ ಹಾಗೂ ರೈತಾಪಿ ಕೆಲಸ ಮಾಡಿಕೊಂಡಿದ್ದರು.

ದಿನಾಂಕ 21-04-2026ರಂದು ಅವರಿಗೆ +91 7502502510 ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು “ಮುಂಬೈ ಪೊಲೀಸ್ ಹೆಡ್‌ಕ್ವಾರ್ಟರ್ಸ್”ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾನೆ.

ಅವನು, “ನಿಮ್ಮ ಹೆಸರಿನ ಆಧಾರ್ ಕಾರ್ಡ್ ಬಳಸಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಅದರಿಂದ ಭಯೋತ್ಪಾದಕರು ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಾಗಿದೆ” ಎಂದು ಹೇಳಿದ್ದಾನೆ.

ಅಷ್ಟೇ ಅಲ್ಲದೆ, ವಾಟ್ಸಪ್ ಮೂಲಕ ಅವರ ಹೆಸರಿನ ಎಟಿಎಂ ಕಾರ್ಡ್‌ನ ಚಿತ್ರ ಕಳುಹಿಸಿ, “ನಿಮ್ಮನ್ನು ಅರೆಸ್ಟ್ ಮಾಡಲು ಬರುತ್ತಿದ್ದೇವೆ” ಎಂದು ಬೆದರಿಕೆ ಹಾಕಿದ್ದಾನೆ.

ಪೊಲೀಸರ ವೇಷದಲ್ಲಿವಿಡಿಯೋ ಕಾಲ್!

ನಂತರ ಮತ್ತೊಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿ, ಮುಂಬೈ ಪೊಲೀಸ್ ಅಧಿಕಾರಿ ಯೂನಿಫಾರ್ಮ್ ಧರಿಸಿಕೊಂಡು “ನಾನು ಐಪಿಎಸ್ ಅಧಿಕಾರಿ” ಎಂದು ಹೇಳಿದ್ದಾನೆ.

ಅವನು “ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ಜಮಾ ಮಾಡಬೇಕು. ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಕಂಡುಬಂದರೆ ಹಣವನ್ನು ಮರಳಿ ನೀಡಲಾಗುತ್ತದೆ” ಎಂದು ನಂಬಿಸಿದ್ದಾನೆ.

ಇದೇ ವೇಳೆ “ಈ ವಿಷಯವನ್ನು ಯಾರೊಂದಿಗೂ ಚರ್ಚಿಸಬಾರದು. ಹೇಳಿದರೆ ತಕ್ಷಣ ಬಂಧಿಸಲಾಗುತ್ತದೆ” ಎಂದು ಬೆದರಿಕೆ ಹಾಕಲಾಗಿದೆ.

ನಂತರ ಮತ್ತೊಬ್ಬ ವ್ಯಕ್ತಿ ಡಿಐಜಿ ಹುದ್ದೆಯ ಅಧಿಕಾರಿ ಎಂದು ಹೇಳಿ ಮತ್ತೆ ವಿಡಿಯೋ ಕಾಲ್ ಮಾಡಿ, ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾನೆ.

ಸಂತ್ರಸ್ತರು, ಹಣ ಫಿಕ್ಸ್ಡ್ ಡಿಪಾಸಿಟ್‌ನಲ್ಲಿ ಇದೆ, ತೆಗೆದುಕೊಳ್ಳಲು ಸಮಯ ಬೇಕು ಎಂದು ಹೇಳಿದಾಗ, ವಂಚಕರು “ಹಣ ವರ್ಗಾವಣೆ ಮಾಡುವವರೆಗೆ ಪ್ರತಿದಿನ ನಿಮ್ಮ ಲೊಕೇಶನ್ ಹಾಗೂ ಫೋಟೋವನ್ನು ವಾಟ್ಸಪ್ ಮೂಲಕ ಕಳುಹಿಸಬೇಕು” ಎಂದು ಸೂಚಿಸಿದ್ದಾರೆ.

ಪೊಲೀಸರು ನಿಜವಾಗಿಯೇ ತನಿಖೆ ನಡೆಸುತ್ತಿದ್ದಾರೆ ಎಂದು ನಂಬಿದ ಅವರು, 21-04-2026ರಿಂದ 24-04-2026ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,74,50,000 ರೂ ಹಣ ವರ್ಗಾವಣೆ ಮಾಡಿದ್ದಾರೆ.

ಕೆಲ ಸಮಯದ ನಂತರ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೇ ಹೋದಾಗ ತಾವು ಮೋಸ ಹೋದ ವಿಷಯ ತಿಳಿದು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಎಂದರೇನು?

ಇತ್ತೀಚೆಗೆ ದೇಶಾದ್ಯಂತ “ಡಿಜಿಟಲ್ ಅರೆಸ್ಟ್” ಎಂಬ ಹೆಸರಿನಲ್ಲಿ ಹೊಸ ರೀತಿಯ ಸೈಬರ್ ವಂಚನೆ ಹೆಚ್ಚಾಗಿದೆ.

ವಂಚಕರು ಪೊಲೀಸ್, ಸಿಬಿಐ, ಇಡಿ, ಆರ್‌ಬಿಐ, ಕಸ್ಟಮ್ಸ್ ಅಥವಾ ಕ್ರೈಂ ಬ್ರಾಂಚ್ ಅಧಿಕಾರಿಗಳಂತೆ ನಟಿಸಿ ಕರೆ ಮಾಡುತ್ತಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಭಯ ಹುಟ್ಟಿಸಿ, ತನಿಖೆ ಹೆಸರಿನಲ್ಲಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವಾಸ್ತವವಾಗಿ “ಡಿಜಿಟಲ್ಅರೆಸ್ಟ್” ಎಂಬಯಾವುದೇಕಾನೂನುಪದ್ಧತಿಯೇಇಲ್ಲ! ಪೊಲೀಸರು ಅಥವಾ ಯಾವುದೇ ಸರ್ಕಾರಿ ಸಂಸ್ಥೆ ವಿಡಿಯೋ ಕಾಲ್ ಮೂಲಕ ಹಣ ಕೇಳುವುದಿಲ್ಲ.

ಎಚ್ಚರವಾಗಿರಿ

  • ಪೊಲೀಸ್, ಸಿಬಿಐ, ಇಡಿ, ಆರ್‌ಬಿಐ ಹೆಸರಿನಲ್ಲಿ ಬಂದ ಕರೆಗಳನ್ನು ತಕ್ಷಣ ನಂಬಬೇಡಿ.
  • ವಿಡಿಯೋ ಕಾಲ್‌ನಲ್ಲಿ ಯೂನಿಫಾರ್ಮ್ ಧರಿಸಿರುವ ಮಾತ್ರಕ್ಕೆ ನಂಬಬೇಡಿ.
  • ಆಧಾರ್, ಬ್ಯಾಂಕ್, OTP, UPI ವಿವರ ಹಂಚಿಕೊಳ್ಳಬೇಡಿ.
  • ಕುಟುಂಬದವರೊಂದಿಗೆ ಚರ್ಚಿಸಬೇಡಿ ಎಂದು ಹೇಳಿದರೆ ಅದು ಪಕ್ಕಾ ಮೋಸದ ಆಟವೆಂದೇ ತಿಳಿಯಿರಿ.
  • ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಹೆಲ್ಪ್‌ಲೈನ್ 1930ಗೆ ಸಂಪರ್ಕಿಸಿ.

ಸೈಬರ್ ವಂಚಕರು ಈಗ ತಂತ್ರಜ್ಞಾನಕ್ಕಿಂತ ಹೆಚ್ಚು ಮಾನಸಿಕ ಒತ್ತಡ ಮತ್ತು ಭಯವನ್ನು ಆಯುಧವನ್ನಾಗಿ ಬಳಸುತ್ತಿದ್ದಾರೆ. “ಬಂಧನ”, “ಎಫ್‌ಐಆರ್”, “ಮನಿ ಲ್ಯಾಂಡರಿಂಗ್”, “ಟೆರರಿಸ್ಟ್ ಲಿಂಕ್” ಎಂಬ ಪದಗಳಿಂದ ಜನರನ್ನು ಬೆಚ್ಚಿಬೀಳಿಸಿ ಹಣ ದೋಚುತ್ತಿದ್ದಾರೆ. ಆದ್ದರಿಂದ, ಭಯಪಡಬೇಡಿ, ಪರಿಶೀಲಿಸಿ ಹೆಜ್ಜೆಯಿಡಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share