ದಾಂಡೇಲಿಯಲ್ಲಿ ಯುವಕನ ರಂಪಾಟ; ಪೊಲೀಸರ ಮೇಲೆಯೇ ಧಮಕಿ
ದಾಂಡೇಲಿ: ನಗರದ ಸೋಮಾನಿ ಸರ್ಕಲ್‌ನಲ್ಲಿ ಕರ್ಕಶ ಶಬ್ದ ಮಾಡುತ್ತಾ ಕೆಟಿಎಂ ಬೈಕ್ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದ ಮೇಲೆ ಯುವಕನ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮಂಗಲದಾಸ ನಾಯ್ಕ ಅವರ ದೂರಿನ ಮೇರೆಗೆ, ಹಳೇ ದಾಂಡೇಲಿಯ ನಿವಾಸಿ ದಿನೇಶ್ ರಾಜಾರಾಮ ಪವಾರ (26) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೋಮಾನಿ ಸರ್ಕಲ್‌ನಲ್ಲಿ ದಿನೇಶ್ ರಾಜಾರಾಮ ಪವಾರ ತನ್ನ ಕೆಟಿಎಂ ಬೈಕ್ ಅನ್ನು ಅತಿಯಾದ ಶಬ್ದದೊಂದಿಗೆ ಚಲಾಯಿಸುತ್ತಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು.
ಈ ವೇಳೆ ಆರೋಪಿಗೆ ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಯಿತು. ಆದರೆ ಆತ ಪರೀಕ್ಷೆಗೆ ಸಹಕರಿಸಲು ನಿರಾಕರಿಸಿದ್ದಲ್ಲದೆ, ತಾನು ಮದ್ಯ ಸೇವಿಸಿದ್ದೇನೆ, ಪರೀಕ್ಷೆಗೆ ಊದುವುದಿಲ್ಲ ಎಂದು ಹೇಳಿದ ಎನ್ನಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ತೊಂದರೆ ಉಂಟುಮಾಡದಂತೆ ಬುದ್ಧಿಮಾತು ಹೇಳಿದರೂ ಆರೋಪಿಯು ಅಸಭ್ಯವಾಗಿ ವರ್ತಿಸಿ, ಜೋರಾಗಿ ಕೂಗಾಡುತ್ತಾ ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಸಮಾಧಾನಪಡಿಸಲು ಮುಂದಾದಾಗ ಅವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಪೊಲೀಸ್ ಸಿಬ್ಬಂದಿಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.