ಜೀವ ಉಳಿಸಿದ ಪಾಯಿಂಟ್ಸ್‌ಮನ್; ಗಣಪತಿ ನಾಯ್ಕ್‌ಗೆ ₹10 ಸಾವಿರ ಬಹುಮಾನ
ಮುರುಡೇಶ್ವರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಸಿಲುಕುವ ಅಪಾಯದಲ್ಲಿದ್ದ ಪ್ರಯಾಣಿಕನೊಬ್ಬನನ್ನು ಸಮಯಪ್ರಜ್ಞೆ ಮತ್ತು ಧೈರ್ಯದಿಂದ ರಕ್ಷಿಸಿದ ಕೊಂಕಣ ರೈಲ್ವೆಯ ಮುರುಡೇಶ್ವರ ರೈಲು ನಿಲ್ದಾಣದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರ ಸಾಹಸ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಬೆಳಿಗ್ಗೆ 7.56ರ ಸುಮಾರಿಗೆ ರೈಲು ಮುರುಡೇಶ್ವರ ರೈಲು ನಿಲ್ದಾಣದಿಂದ ಹೊರಡುತ್ತಿದ್ದ ವೇಳೆ, 22 ವರ್ಷದ ಮೊಹಮ್ಮದ್ ಗೌಫುರ್ ಎಂಬ ಪ್ರಯಾಣಿಕ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿದ ಆತ ರೈಲಿನೊಂದಿಗೆ ಎಳೆಯಲ್ಪಡುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ದೃಶ್ಯವನ್ನು ಗಮನಿಸಿದ ಕರ್ತವ್ಯ ನಿರತ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಕ್ಷಣಾರ್ಧದಲ್ಲೇ ಸ್ಥಳಕ್ಕೆ ಧಾವಿಸಿ, ಪ್ರಯಾಣಿಕನನ್ನು ಬಿಗಿಯಾಗಿ ಹಿಡಿದು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಜಾರುವುದನ್ನು ತಡೆದರು. ರೈಲು ಸಂಪೂರ್ಣವಾಗಿ ನಿಲ್ಲುವವರೆಗೂ ಪ್ರಯಾಣಿಕನನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಂಡು ದೊಡ್ಡ ದುರಂತವನ್ನೇ ತಪ್ಪಿಸಿದರು.
ಗಣಪತಿ ನಾಯ್ಕ್ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಕರ್ತವ್ಯನಿಷ್ಠೆಯನ್ನು ಮೆಚ್ಚಿದ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (CMD) ಸಂತೋಷ್ ಕುಮಾರ್ ಝಾ ಅವರು ಅವರಿಗೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ.
ಕಾರವಾರ ವಲಯದ ಸಹಾಯಕ ವಲಯ ಮೇಲ್ವಿಚಾರಕ (AS/KAWR) ಸಂಜೀವ ಪೆಡನೇಕರ್, ಸಿಎಂಡಿ ಪರವಾಗಿ ಗಣಪತಿ ನಾಯ್ಕ್ ಅವರನ್ನು ಸನ್ಮಾನಿಸಿ ₹10,000 ನಗದು ಬಹುಮಾನವನ್ನು ವಿತರಿಸಿದರು.
ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಗಣಪತಿ ನಾಯ್ಕ್ ಅವರ ಸಮಯೋಚಿತ ಕಾರ್ಯ ಇಡೀ ರೈಲ್ವೆ ಇಲಾಖೆಗೆ ಹೆಮ್ಮೆ ತಂದಿದ್ದು, ಸುರಕ್ಷತೆಗೆ ಸಿಬ್ಬಂದಿ ನೀಡುವ ಆದ್ಯತೆಯ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.