Join WhatsApp Group
Ad
Home Local News ದಾರಿ ತಪ್ಪಿಸಿದ ಗೂಗಲ್‌ ಸರ್ಚ್!

ದಾರಿ ತಪ್ಪಿಸಿದ ಗೂಗಲ್‌ ಸರ್ಚ್!

0
3

ನಕಲಿ ಹೆಲ್ಪ್‌ಲೈನ್‌ಗೆ ಕರೆ ಮಾಡಿ 90 ಸಾವಿರ ಕಳೆದುಕೊಂಡ ಡ್ರೈವರ್

ಜೋಯಿಡಾ: ಗೂಗಲ್‌ನಲ್ಲಿ ಹುಡುಕಿದ ಕಸ್ಟಮರ್ ಕೇರ್ ಸಂಖ್ಯೆಯನ್ನೇ ನಂಬಿ ಕರೆ ಮಾಡಿದ ಲಾರಿ ಚಾಲಕನೊಬ್ಬ ಸೈಬರ್ ವಂಚಕರ ಬಲೆಗೆ ಬಿದ್ದು ₹90 ಸಾವಿರ ಕಳೆದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ಬೆಳಕಿಗೆ ಬಂದಿದೆ.

ರಾಮನಗರದ ದುರ್ಗಾದೇವಿ ಗಲ್ಲಿಯ ನಿವಾಸಿ ಹಾಗೂ ಚಾಲಕರಾದ ಪವನ್‌ಕುಮಾರ್ ದೀಪಕ್ ಖಟಾವಕರ್ (38) ಅವರು ನೀಡಿದ ದೂರಿನ ಮೇರೆಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad

ಮಾರ್ಚ್ 5ರಂದು ರಾತ್ರಿ ಧಾರವಾಡದಿಂದ ರಾಮನಗರಕ್ಕೆ ಬರುತ್ತಿದ್ದ ವೇಳೆ ಪವನ್‌ಕುಮಾರ್ ಚಾಲನೆ ಮಾಡುತ್ತಿದ್ದ ಐಚರ್ ಕಂಪನಿಯ ಎಲ್‌ಪಿಜಿ ಸಿಲಿಂಡರ್ ಲಾರಿ ಮಾರ್ಗಮಧ್ಯೆ ಕೆಟ್ಟು ನಿಂತಿತ್ತು. ಮೆಕ್ಯಾನಿಕ್ ನೆರವು ಪಡೆಯಲು ಗೂಗಲ್‌ನಲ್ಲಿ ಐಚರ್ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದಾಗ ಅಲ್ಲಿ ಸಿಕ್ಕ 7319673644 ಸಂಖ್ಯೆಗೆ ಕರೆ ಮಾಡಿದ್ದಾರೆ.

ಅತ್ತ ಕಡೆಯ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, “ನಿಮ್ಮ ಟಿಕೆಟ್ ಬುಕ್ ಆಗಿದೆ. ನಿಮ್ಮ ಮೊಬೈಲ್‌ಗೆ ಬಂದ ಟಿಕೆಟ್ ಸಂಖ್ಯೆಯನ್ನು ಹೇಳಿ, ಹುಬ್ಬಳ್ಳಿಯಿಂದ ಮೆಕ್ಯಾನಿಕ್ ಕಳುಹಿಸುತ್ತೇವೆ” ಎಂದು ನಂಬಿಸಿದ್ದಾನೆ. ಪವನ್‌ಕುಮಾರ್ ಅವರು ಮೊಬೈಲ್‌ಗೆ ಬಂದ ಸಂಖ್ಯೆಯನ್ನು ತಿಳಿಸಿದ ತಕ್ಷಣ ಮೊಬೈಲ್ ಹ್ಯಾಂಗ್ ಆಗಿ ಬಳಿಕ ಸ್ವಿಚ್ ಆಫ್ ಆಗಿದೆ.

ಎರಡು ಗಂಟೆಗಳ ನಂತರ ಮೊಬೈಲ್ ಸಾಮಾನ್ಯ ಸ್ಥಿತಿಗೆ ಬಂದಾಗ, ಅವರ ಕೆನರಾ ಬ್ಯಾಂಕ್ ಖಾತೆಯಿಂದ ₹90 ಸಾವಿರ ಹಣ ಕಡಿತವಾಗಿ, ‘ಸೌರಭ್ ಯಾದವ್’ ಎಂಬ ಅಪರಿಚಿತರ ಹೆಸರಿಗೆ ವರ್ಗಾವಣೆಯಾಗಿರುವ ಸಂದೇಶ ಬಂದಿದೆ.

ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿಗೆ ದೂರು ನೀಡಿದ್ದು, ಹಣ ಮರಳಿ ಸಿಗುತ್ತದೆ ಎಂದು ಭಾವಿಸಿ, ಚಾಲನಾ ಕೆಲಸದ ಕಾರಣದಿಂದ ಪೊಲೀಸ್ ಠಾಣೆಗೆ ದೂರು ನೀಡಲು ತಡವಾಗಿದೆ ಎಂದು ಪವನ್‌ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಗೂಗಲ್‌ನಲ್ಲಿ ಸಿಗುವ ಎಲ್ಲ ಕಸ್ಟಮರ್ ಕೇರ್ ಸಂಖ್ಯೆಗಳೂ ಅಧಿಕೃತವಾಗಿರುವುದಿಲ್ಲ. ಅಪರಿಚಿತರಿಗೆ OTP, PIN ಅಥವಾ ಮೊಬೈಲ್‌ಗೆ ಬಂದ ಯಾವುದೇ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಹಣ ವಂಚನೆಯಾದರೆ ವಿಳಂಬ ಮಾಡದೆ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ. ತ್ವರಿತ ಕ್ರಮದಿಂದ ಹಣ ಮರಳಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!