ಕಾರವಾರ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡಿದ್ದ ಆರೋಪದಡಿ ಭಟ್ಕಳ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ನಾಲ್ವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 11ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಭಟ್ಕಳದ ಹನೀಫಾಬಾದ್ ಪ್ರದೇಶದ ಸೈಯ್ಯದ್ ಮೂಸಾ (28) ಎಂಬಾತ ಜೂನ್ 11ರಂದು ರಾತ್ರಿ ಸಂಶುದ್ದೀನ್ ಸರ್ಕಲ್ ಸಮೀಪ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ವೇಳೆ ಪತ್ತೆಯಾಗಿದ್ದಾನೆ. ಇದೇ ದಿನ ನೂರಪಳ್ಳಿ ಸಮೀಪ ಹನೀಫಾಬಾದ್ ಹೆಬ್ಳೆಯ ಮುರ್ತುಜಾ ಅಲಿ (31) ಹಾಗೂ ಮುಗ್ದುಂ ಕಾಲೋನಿ ಕ್ರಾಸ್ ಸಮೀಪ ಜಾಫರ್ ಸಾಧಿಕ್ (24) ಎಂಬಾತರೂ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇದೇ ವೇಳೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸೂರಖಾನಗಲ್ಲಿಯ ಪೈಜಾನ್ ಯಾಸೀನ್ ಶೇಖ್ (20) ಎಂಬಾತನ ವಿರುದ್ಧವೂ ಗಾಂಜಾ ಸೇವನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಜೂನ್ 12ರಂದು ಮಧ್ಯಾಹ್ನ ಪ್ರಭಾತವನ ರಸ್ತೆ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಭಟ್ಕಳ ಮತ್ತು ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.