Ad
Home Local News ಬಸ್‌ನ ಲಗೇಜ್ ಡಿಕ್ಕಿ ಬಡಿದು ಕೆಎಸ್‌ಆರ್‌ಟಿಸಿ ಚಾಲಕ ಸಾವು

ಬಸ್‌ನ ಲಗೇಜ್ ಡಿಕ್ಕಿ ಬಡಿದು ಕೆಎಸ್‌ಆರ್‌ಟಿಸಿ ಚಾಲಕ ಸಾವು

0
5

ಕುಮಟಾ: ಖಾಸಗಿ ಬಸ್‌ನ ಲಗೇಜ್ ಡಿಕ್ಕಿಯ ಬಾಗಿಲು ಬಡಿದು ಸಂಭವಿಸಿದ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಮೃತಪಟ್ಟ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಹೊನ್ನಾವರ ತಾಲೂಕಿನ ಹಳದೀಪುರದ ಕಿರಬೈಲ್ ನಿವಾಸಿ, ಕೆಎಸ್‌ಆರ್‌ಟಿಸಿ ಚಾಲಕ ಬಾಲಚಂದ್ರ ಗಜಾನನ ನಾಯ್ಕ (43) ಎಂದು ಗುರುತಿಸಲಾಗಿದೆ.

ಈ ಕುರಿತು ಮೃತರ ಸಹೋದರ, ನಿವೃತ್ತ ಸೈನಿಕ ಗಿರೀಶ ಗಜಾನನ ನಾಯ್ಕ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 12ರಂದು ರಾತ್ರಿ ಸುಮಾರು 9.15 ಗಂಟೆಗೆ ಕುಮಟಾ ಪಟ್ಟಣದ ಮಾಸ್ತಿಕಟ್ಟೆ ಶ್ರೀ ಮಹಾಸತಿ ದೇವಸ್ಥಾನದ ಸಮೀಪ, ಕೆಎ-51/ಎಡಿ-5297 ಸಂಖ್ಯೆಯ ಸುಗಮಾ ಬಸ್‌ನ ಚಾಲಕ ರಾಮಚಂದ್ರ ಮಾಳಪ್ಪ ನಾಯ್ಕ ಎಂಬಾತ ಬಸ್‌ನ ಎಡಭಾಗದ ಲಗೇಜ್ ಡಿಕ್ಕಿಯನ್ನು ತೆರೆದ ಸ್ಥಿತಿಯಲ್ಲೇ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ.

ಅದೇ ವೇಳೆ ಬಾಲಚಂದ್ರ ನಾಯ್ಕ ಅವರು ತಮ್ಮ ವಿದ್ಯುತ್ ಸ್ಕೂಟರ್ (ಕೆಎ-47/ಇಬಿ-6598)ನಲ್ಲಿ ಪೆಟ್ರೋಲ್ ಬಂಕ್ ಸಮೀಪದಿಂದ ಸನ್ಮಾನ ಹೋಟೆಲ್ ಕಡೆಗೆ ತೆರಳುತ್ತಿದ್ದಾಗ, ಬಸ್‌ನ ತೆರೆದಿದ್ದ ಡಿಕ್ಕಿಯ ಬಾಗಿಲು ಅವರ ಕುತ್ತಿಗೆ ಮತ್ತು ತಲೆಗೆ ಬಡಿದಿದೆ. ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10.29ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!