Monday, September 7, 2026
Join WhatsApp Group
HomeLocal Newsನಗುಮೊಗದ ಶಿಕ್ಷಕಿಗೆ ಭಾವಪೂರ್ಣ ಬೀಳ್ಕೊಡುಗೆ

ನಗುಮೊಗದ ಶಿಕ್ಷಕಿಗೆ ಭಾವಪೂರ್ಣ ಬೀಳ್ಕೊಡುಗೆ

ಅಂಕೋಲಾ: ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾಣದ ಮಹತ್ತರ ಹೊಣೆಗಾರಿಕೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದ್ದು, ಅಂತಹ ಸಮರ್ಪಿತ ಶಿಕ್ಷಕರ ಸೇವೆ ಸದಾ ಸ್ಮರಣೀಯವಾಗಿರುತ್ತದೆ.

ಅಂಕೋಲಾ ತಾಲೂಕಿನ ಹಳವಳ್ಳಿ ನಂ.2 (ಕನಕನಹಳ್ಳಿ) ಸರ್ಕಾರಿ ಶಾಲೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ವಿಮಲಾ ಹೆಗಡೆ ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ಶಾಲೆಯ ಶಿಕ್ಷಕಿ ಶಿರಿನ್ ಶೇಖ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹೆಗ್ಗಾರ್ ಶಾಲೆಯ ಮುಖ್ಯ ಶಿಕ್ಷಕ ಗಣೇಶ ಭಟ್ಟ, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಇರುವ ಶ್ರೇಷ್ಠ ಸ್ಥಾನಮಾನವನ್ನು ವಿವರಿಸಿ, ವ್ಯಾಸರಿಂದ ಆರಂಭವಾದ ಗುರುಪರಂಪರೆಯ ಮಹತ್ವವನ್ನು ಉಲ್ಲೇಖಿಸಿದರಲ್ಲದೆ, ವಿಮಲಾ ಹೆಗಡೆ ಅವರ ಶೈಕ್ಷಣಿಕ ಸೇವೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ಕೊಂಡಾಡಿದರು.

ಅಭಿನಂದನಾ ನುಡಿಗಳನ್ನಾಡಿದ ಮುಖ್ಯ ಶಿಕ್ಷಕಿ ಶಾರದಾ ಹೆಬ್ಬಾರ, ವಿಮಲಾ ಹೆಗಡೆ ಅವರು ಶಿಸ್ತು, ಸಮಯಪಾಲನೆ, ತಾಳ್ಮೆ ಹಾಗೂ ಸದಾ ನಗುಮುಖದ ವ್ಯಕ್ತಿತ್ವದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅಭ್ಯಾಸದಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮುಂದೆ ತರುವ ವಿಶೇಷ ಗುಣ ಅವರಲ್ಲಿತ್ತು. ಶಾಲೆಯ ಆಡಳಿತಾತ್ಮಕ ಕಾರ್ಯಗಳಲ್ಲಿಯೂ ಹಿರಿಯಕ್ಕನಂತೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಗಾಂವ್ಕರ್ ಮಾತನಾಡಿ, ವಿಮಲಾ ಹೆಗಡೆ ಅವರ ತಾಳ್ಮೆ ಹಾಗೂ ಸಮಯಪಾಲನೆ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.

ಮಾಜಿ ಅಧ್ಯಕ್ಷ ಸತೀಶ ಭಟ್ಟ ಮಾತನಾಡಿ, ಶಿಕ್ಷಕರಾಗಲು ಕಠಿಣ ಪರಿಶ್ರಮ ಹಾಗೂ ಬದ್ಧತೆ ಅಗತ್ಯವಾಗಿದ್ದು, ವಿಮಲಾ ಹೆಗಡೆ ಅವರು ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು. ಅವರ ಪತಿ ಗಣಪತಿ ಹೆಗಡೆ ಅವರ ಸಹಕಾರವನ್ನೂ ಸ್ಮರಿಸಿದರು.

ಮಾಜಿ ಅಧ್ಯಕ್ಷ ಕೃಷ್ಣ ಗಾಂವ್ಕರ್ ಮಾತನಾಡಿ, ಎರಡು ದಶಕಗಳ ಕಾಲ ವಿದ್ಯಾರ್ಥಿಗಳ ಸೇವೆಯಲ್ಲಿ ತೊಡಗಿದ್ದ ವಿಮಲಾ ಹೆಗಡೆ ಅವರ ನಿವೃತ್ತಿ ಜೀವನ ಸಮಾಜಸೇವೆಗೆ ಮೀಸಲಾಗಲಿ ಎಂದು ಶುಭ ಹಾರೈಸಿದರು.

ಸಹೋದ್ಯೋಗಿ ಲಲಿತಾ ಕೂರ್ಸೆ ಮಾತನಾಡಿ, ಮಕ್ಕಳಿಗೆ ಶಿಕ್ಷೆ ನೀಡುವುದಕ್ಕಿಂತ ಆತ್ಮಾವಲೋಕನದ ಮೂಲಕ ತಪ್ಪು ತಿದ್ದಿಕೊಳ್ಳುವ ಪಾಠವನ್ನು ವಿಮಲಾ ಹೆಗಡೆ ಅವರಿಂದ ಕಲಿತಿದ್ದೇನೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಮಲಾ ಹೆಗಡೆ, ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ದಿನಗಳನ್ನು ನೆನಪಿಸಿಕೊಂಡರು. ರಾಮನಗುಳಿ ಶಾಲೆಗೆ ಹೊಳೆಯಲ್ಲಿ ದೋಣಿ ಮೂಲಕ ತೆರಳುತ್ತಿದ್ದ ಸಂದರ್ಭಗಳನ್ನು ಸ್ಮರಿಸಿದ ಅವರು, ಸೇವಾವಧಿಯಲ್ಲಿ ತಾವು ಕಾರ್ಯನಿರ್ವಹಿಸಿದ ವಿವಿಧ ಶಾಲೆಗಳ ಸಹೋದ್ಯೋಗಿಗಳು, ಗ್ರಾಮಸ್ಥರು ಹಾಗೂ ತಮ್ಮ ವಾಸ್ತವ್ಯಕ್ಕೆ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 27 ವರ್ಷಗಳ ಸೇವಾ ಜೀವನದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹೇಂದ್ರ ಭಟ್ಟ ಮಾತನಾಡಿ, ಇದು ಕೇವಲ ನಿವೃತ್ತಿ ಸಮಾರಂಭವಲ್ಲ, ಭಾವನೆಗಳ ಸಂಗಮವಾಗಿದೆ. ನಿವೃತ್ತಿಯ ನಂತರವೂ ವಿಮಲಾ ಹೆಗಡೆ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆಯಬೇಕು ಎಂದು ಆಶಿಸಿದರು.

ನಿರೂಪಣೆ ಮಾಡಿದ ರಮೇಶ ಹೆಗಡೆ, ವಿಮಲಾ ಹೆಗಡೆ ಅವರ ಸಮಯಪಾಲನೆ, ತಾಳ್ಮೆ ಮತ್ತು ಸೇವಾ ಮನೋಭಾವದ ಹಿಂದೆ ಅವರ ಪತಿ ಜಿ.ಜಿ. ಹೆಗಡೆ ಅವರ ಬೆಂಬಲವೂ ಪ್ರಮುಖವಾಗಿದೆ ಎಂದು ಹೇಳಿದರು. ಅಶ್ವಿನಿ ಗೌಡ ಸನ್ಮಾನ ಪತ್ರ ವಾಚಿಸಿದರು. ಮಹಾಲಕ್ಷ್ಮಿ ನಾಯ್ಕ ವಂದಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ವಿಮಲಾ ಹೆಗಡೆ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share