Monday, September 7, 2026
Join WhatsApp Group
HomeAgricultureಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಿ

ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಿ

ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಕೃಷಿ ಇಲಾಖೆ ಮನವಿ

ಕಾರವಾರ: ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧ ಬೆಳೆಗಳಿಗೆ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯ ಪಡೆಯುವಂತೆ ಕೃಷಿ ಇಲಾಖೆ ಕೋರಿದೆ.

ಯೋಜನೆಯಡಿ ಭತ್ತ (ಮಳೆ ಆಶ್ರಿತ) ಬೆಳೆಗೆ ಪ್ರತಿ ಎಕರೆಗೆ ₹30,595 ವಿಮಾ ಮೊತ್ತ ನಿಗದಿಯಾಗಿದ್ದು, ರೈತರು ₹612 ಪ್ರೀಮಿಯಂ ಪಾವತಿಸಬೇಕು. ಈ ಸೌಲಭ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಅನ್ವಯವಾಗಲಿದೆ. ಭತ್ತ (ನೀರಾವರಿ ಆಶ್ರಿತ) ಬೆಳೆಗೆ ಪ್ರತಿ ಎಕರೆಗೆ ₹43,950 ವಿಮಾ ಮೊತ್ತ ನಿಗದಿಯಾಗಿದ್ದು, ₹879 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದು ಮುಂಡಗೋಡ ಮತ್ತು ಹಳಿಯಾಳ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಎರಡೂ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ.

ಮೆಕ್ಕೆಜೋಳ (ಮಳೆ ಆಶ್ರಿತ) ಬೆಳೆಗೆ ಪ್ರತಿ ಎಕರೆಗೆ ₹27,317 ವಿಮಾ ಮೊತ್ತ ನಿಗದಿಯಾಗಿದ್ದು, ₹546 ಪ್ರೀಮಿಯಂ ಪಾವತಿಸಬೇಕು. ಈ ಯೋಜನೆ ಮುಂಡಗೋಡ, ಶಿರಸಿ ಮತ್ತು ಹಳಿಯಾಳ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳಿಗೆ ಅನ್ವಯಿಸುತ್ತದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ಹತ್ತಿ (ಮಳೆ ಆಶ್ರಿತ) ಬೆಳೆಗೆ ಪ್ರತಿ ಎಕರೆಗೆ ₹24,161 ವಿಮಾ ಮೊತ್ತ ನಿಗದಿಯಾಗಿದ್ದು, ₹1,208 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹಳಿಯಾಳ ತಾಲೂಕಿನ ಎಲ್ಲಾ ಹೋಬಳಿಗಳ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇದಕ್ಕೂ ಜುಲೈ 31 ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವಾಗಿದೆ.

ರೈತರು ನೋಂದಣಿಗೆ ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಜಮೀನಿನ ಪಹಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನೋಂದಣಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗಳು, ಸಿಎಸ್‌ಸಿ ಕೇಂದ್ರಗಳು ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಸಹಾಯವಾಣಿ 1800-103-5499 ಸಂಪರ್ಕಿಸಬಹುದಾಗಿದ್ದು, ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಂದಲೂ ಮಾಹಿತಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share