Saturday, June 20, 2026
HomeLocal Newsಉತ್ತರ ಕನ್ನಡವನ್ನು ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸದಿರಿ

ಉತ್ತರ ಕನ್ನಡವನ್ನು ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸದಿರಿ

ಯಲ್ಲಾಪುರ: ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಆ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ಯಾವುದೇ ಪ್ರಯತ್ನಕ್ಕೆ ನಮ್ಮ ವಿರೋಧವಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಹಾಗೂ ವ್ಯಾವಹಾರಿಕವಾಗಿ ಧಾರವಾಡದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಅನಾದಿ ಕಾಲದಿಂದಲೂ ಜಿಲ್ಲೆಯ ಜನರು ಹುಬ್ಬಳ್ಳಿ-ಧಾರವಾಡದೊಂದಿಗೆ ಸಾಮಾಜಿಕ, ಕೌಟುಂಬಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ.

ನ್ಯಾಯಾಂಗದ ವಿಚಾರದಲ್ಲಿಯೂ ಕಳೆದ ಹಲವು ವರ್ಷಗಳಿಂದ ಧಾರವಾಡ ಹೈಕೋರ್ಟ್ ಪೀಠದ ಸೇವೆ ಪಡೆಯುತ್ತಿದ್ದು, ಅಲ್ಲಿಯೇ ನ್ಯಾಯಾಂಗ ಚಟುವಟಿಕೆಗಳಿಗೆ ಹೊಂದಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಕರಾವಳಿ ಭಾಗದ ತುದಿಯಲ್ಲಿರುವ ಭಟ್ಕಳ ತಾಲೂಕನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ತಾಲೂಕುಗಳು ಮಂಗಳೂರಿಗಿಂತ ಧಾರವಾಡಕ್ಕೆ ಹತ್ತಿರದಲ್ಲಿವೆ. ಹಳಿಯಾಳದಿಂದ ಧಾರವಾಡ ಕೇವಲ 35 ರಿಂದ 40 ಕಿ.ಮೀ. ದೂರದಲ್ಲಿದ್ದರೆ, ಮಂಗಳೂರು ಸುಮಾರು 340 ಕಿ.ಮೀ. ದೂರದಲ್ಲಿದೆ. ಜಿಲ್ಲೆಯ ಘಟ್ಟದ ಮೇಲಿನ ಇತರ ತಾಲೂಕುಗಳಿಗೂ ಇದೇ ಪರಿಸ್ಥಿತಿ ಇದೆ ಎಂದು ವಿವರಿಸಿದರು.

ಹೈಕೋರ್ಟ್ ಸಂಬಂಧಿತ ಕೆಲಸಗಳಿಗಾಗಿ ಮಂಗಳೂರಿಗೆ ತೆರಳಬೇಕಾದರೆ ಸಾರ್ವಜನಿಕರು ಹೆಚ್ಚುವರಿ ಸಮಯ, ಹಣ ಹಾಗೂ ಶ್ರಮ ವ್ಯಯಿಸಬೇಕಾಗುತ್ತದೆ. ವಿಶೇಷವಾಗಿ ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿರುವ ಬಡ ಕಕ್ಷಿದಾರರು, ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಇದು ದೊಡ್ಡ ಹೊರೆ ಆಗಲಿದೆ.

ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕಾದರೆ ಒಂದು ದಿನ ಮುಂಚಿತವಾಗಿಯೇ ಮಂಗಳೂರಿಗೆ ತೆರಳಿ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ನ್ಯಾಯಾಲಯವನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದಿದ್ದರೆ ನ್ಯಾಯಾಂಗವನ್ನು ಅಪಮಾನಿಸಿದ ಕಳಂಕವನ್ನೂ ಹೊರಬೇಕಾದೀತು. ಇದರಿಂದ ಪ್ರಯಾಣ, ಊಟ ಹಾಗೂ ವಸತಿ ವೆಚ್ಚ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ ಯಾವುದೇ ಕಾರಣಕ್ಕೂ ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಿಂದ ಹೊರಗಿಟ್ಟು ಮಂಗಳೂರು ಸಂಚಾರಿ ಪೀಠಕ್ಕೆ ಸೇರಿಸಬಾರದು. ಜಿಲ್ಲೆಯ ಜನರ ಅನುಕೂಲ, ಭೌಗೋಳಿಕ ವಾಸ್ತವತೆ ಹಾಗೂ ಈಗಿರುವ ನ್ಯಾಯಾಂಗ ವ್ಯವಸ್ಥೆಯನ್ನು ಪರಿಗಣಿಸಿ ಉತ್ತರ ಕನ್ನಡವನ್ನು ಧಾರವಾಡ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ತಕ್ಷಣ ಗಮನಹರಿಸಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಶೇಷವಾಗಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಸಾರ್ವಜನಿಕ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ. ಸ್ಥಾನಿಕ ಪರಿಸ್ಥಿತಿಯನ್ನು ಗಮನಿಸಿ, ಈಗಿರುವಂತೆಯೇ ಹೈಕೋರ್ಟ್‌ ಪೀಠವನ್ನು ಮುಂದುವರೆಸಲಿ.

ಜಿಲ್ಲೆಯ ಶಾಸಕದ್ವಯರು ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಇದಕ್ಕೆ ನಮ್ಮೆಲ್ಲರ ಸ್ವಾಗತವಿದೆ. ಉಳಿದ ಶಾಸಕರೂ ಈಬಗ್ಗೆ ಧ್ವನಿಯೆತ್ತಲಿ. ಉತ್ತರಕನ್ನಡದಲ್ಲಿಯೇ ಹೈಕೋರ್ಟ್‌ ಪೀಠವನ್ನು ಸ್ಥಾಪಿಸುವ ಸಾಧ್ಯತೆಗಳಿದ್ದಲ್ಲಿ ಅದರ ಬಗ್ಗೆಯೂ ಪರಿಶೀಲಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೀರಣ್ಣ ನಾಯ್ಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಶ್ರೀರಂಗ ಕಟ್ಟಿ, ಶ್ಯಾಮಿಲಿ ಪಾಠಣಕರ, ಪ್ರಭಾಕರ ನಾಯ್ಕ, ರಮೇಶ ಕಾಮತ್‌ ಇದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share