Friday, July 24, 2026
Join WhatsApp Group
HomeUncategorizedಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಸನ್ಮಾನ – ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ಕರೆ

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಸನ್ಮಾನ – ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ಕರೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಸಿಇಟಿ, ನೀಟ್‌ನಲ್ಲಿ ಯಶಸ್ಸು ಸಾಧ್ಯ

ಮೈಸೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಯುವ ಅಪಾರ ಆಸಕ್ತಿ ಇದ್ದು, ಸೂಕ್ತ ಅವಕಾಶ ದೊರೆತರೆ ಅವರು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವೆಂದು ಮೈಸೂರಿನ ಶ್ರೀ ವಿದ್ಯಾ ಕೀರ್ತಿ ನೀಟ್ ಅಕಾಡೆಮಿಯ ಮುಖ್ಯಸ್ಥ ರಾಘವೇಂದ್ರ ಭಾರದ್ವಾಜ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಶ್ರದ್ಧೆ ಇರುವುದರಿಂದ, ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ಸಿಇಟಿ, ನೀಟ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಈ ಉದ್ದೇಶದಿಂದ ಗ್ರಾಮಾಂತರ ಭಾಗದ ಕಾಲೇಜುಗಳಿಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾ ಸಂಸ್ಥೆಯ ಖಜಾಂಚಿ ಪಿ. ರವಿ ಮಾತನಾಡಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಚಿತ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ ಮತ್ತು ಉದ್ದೇಶ ಇದ್ದಲ್ಲಿ ಯಾವುದೇ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು ಎಂದರು.ನಮ್ಮ ಕಾಲೇಜಿನಲ್ಲಿ ದಿನನಿತ್ಯದ ಪಾಠಗಳ ಜೊತೆಗೆ ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಸಂಸ್ಥೆ ವತಿಯಿಂದ ಅಂತರ್ ಕಾಲೇಜು ಮಟ್ಟದ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೀಟ್, ಸಿಇಟಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಪೋಷಕರಿಗೂ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾ ಕೀರ್ತಿ ನೀಟ್ ಅಕಾಡೆಮಿಯ ನವೀನ್ ಕುಮಾರ್, ರಜತ್, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ನಿರ್ದೇಶಕರಾದ ಶೈಲಪ್ರಸಾದ್, ಗುರುದತ್, ವಿಜಯ್ ಕುಮಾರ್, ಕೃಷ್ಣಮೂರ್ತಿ, ಆಡಳಿತಾಧಿಕಾರಿ ಜೆ.ಸಿ. ನಟರಾಜ್, ಪ್ರಾಂಶುಪಾಲ ಸತೀಶ್, ಮುಖ್ಯ ಶಿಕ್ಷಕರಾದ ಮುರಳಿ ಕೃಷ್ಣ, ರಾಮಶೆಟ್ಟಿ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share