Monday, September 7, 2026
Join WhatsApp Group
HomeLocal Newsಗಂಗಾವಳಿ ಉಳಿಸಿ ಹಕ್ಕೊತ್ತಾಯ: ಸೆ.3ರಂದು ಕಾರವಾರ–ಅಂಕೋಲಾ–ಗೋಕರ್ಣ ಚಲೋ

ಗಂಗಾವಳಿ ಉಳಿಸಿ ಹಕ್ಕೊತ್ತಾಯ: ಸೆ.3ರಂದು ಕಾರವಾರ–ಅಂಕೋಲಾ–ಗೋಕರ್ಣ ಚಲೋ

ಶಿರಸಿ: ಬೇಡ್ತಿ–ಗಂಗಾವಳಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 3ರಂದು ‘ಗಂಗಾವಳಿ–ಕರಾವಳಿ ಉಳಿಸಿ ಜಾಗೃತಿ ಅಭಿಯಾನ’ ಹಾಗೂ ಕಾರವಾರ–ಅಂಕೋಲಾ–ಗೋಕರ್ಣ ಚಲೋ–ಜಾಥಾ ಹಮ್ಮಿಕೊಳ್ಳಲಾಗಿದೆ.

ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯಲಿರುವ ಜಾಥಾದಲ್ಲಿ ಪರಿಸರ ಸಂಘಟನೆಗಳು, ರೈತರು, ಮೀನುಗಾರರು, ವನವಾಸಿಗಳು ಹಾಗೂ ಜಿಲ್ಲೆಯ ಸಾಮಾಜಿಕ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಜಾಥಾ ಗೋಕರ್ಣ ತಲುಪಿ, ಸ್ಥಳೀಯರೊಂದಿಗೆ ಗೋಕರ್ಣ ಗ್ರಾಮ ಪಂಚಾಯಿತಿಗೆ ನದಿ ತಿರುವು ಯೋಜನೆ ಕೈಬಿಡುವಂತೆ ಹಕ್ಕೊತ್ತಾಯ ಮನವಿ ಸಲ್ಲಿಸಲಿದೆ.

ಮಧ್ಯಾಹ್ನ 12 ಗಂಟೆಗೆ ಕಾರವಾರದ ಸಾರ್ವಜನಿಕರೊಂದಿಗೆ ಜಾಥಾ ತಂಡ ಕಾರವಾರ ನಗರಸಭೆಗೆ ತೆರಳಿ ಹಕ್ಕೊತ್ತಾಯ ಪತ್ರ ಸಲ್ಲಿಸಲಿದೆ.

ಮಧ್ಯಾಹ್ನ 1 ಗಂಟೆಗೆ ಜಾಥಾ ಜಿಲ್ಲಾಧಿಕಾರಿ ಕಚೇರಿ ತಲುಪಲಿದ್ದು, ಸಾಮಾಜಿಕ ಮುಖಂಡರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಸುಮಾರು 10 ಸಾವಿರ ಹಕ್ಕೊತ್ತಾಯ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 3.30ಕ್ಕೆ ಜಾಥಾ ತಂಡ ಅಂಕೋಲಾ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ, ಸ್ಥಳೀಯ ಜನರೊಂದಿಗೆ ‘ಗಂಗಾವಳಿ ಉಳಿಸಿ’ ಹಕ್ಕೊತ್ತಾಯ ಸಲ್ಲಿಸಲಿದೆ.

ಗಂಗಾವಳಿ ನದಿಯ ಹರಿವು ಕಡಿಮೆಯಾದರೆ ಅಂಕೋಲಾ ಭಾಗದ ಕುಡಿಯುವ ನೀರು, ಕೃಷಿ, ಅಂತರ್ಜಲ, ಮೀನುಗಾರಿಕೆ ಮತ್ತು ಕರಾವಳಿಯ ಅಳಿವೆ–ಕಾಂಡ್ಲಾ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ. ನದಿಯ ಸಹಜ ಹರಿವು ಕುಂಠಿತವಾದರೆ ಉಪ್ಪುನೀರು ಒಳನುಗ್ಗುವಿಕೆ, ಭೂಕುಸಿತ ಹಾಗೂ ಸ್ಥಳೀಯ ಜನರ ಜೀವನೋಪಾಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದು ಸಮಿತಿ ಹೇಳಿದೆ.

ಹೀಗಾಗಿ ಬೃಹತ್ ಗಂಗಾವಳಿ (ಬೇಡ್ತಿ) ನದಿ ತಿರುವು ಯೋಜನೆಯನ್ನು ಕೈಬಿಟ್ಟು, ಸ್ಥಳೀಯ ಕೃಷಿ ಹಾಗೂ ಗ್ರಾಮ–ಪಟ್ಟಣಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ಪರಿಸರಸ್ನೇಹಿ ಸ್ಥಳೀಯ ನೀರಾವರಿ ಯೋಜನೆಗಳನ್ನು ರೂಪಿಸಬೇಕು ಎಂಬುದು ಸಮಿತಿಯ ಪ್ರಮುಖ ಹಕ್ಕೊತ್ತಾಯವಾಗಿದೆ.

ಕಾರವಾರ, ಅಂಕೋಲಾ, ಗೋಕರ್ಣ, ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ಕುಮಟಾ ಭಾಗಗಳ ಸಾಮಾಜಿಕ ಮುಖಂಡರು, ಪರಿಸರ ಸಂಘಟನೆಗಳು, ರೈತರು, ಮೀನುಗಾರರು ಮತ್ತು ವನವಾಸಿಗಳು ಜಾಥಾ ಹಾಗೂ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share