ಜಾಮೀನಿನ ಮೇಲೆ ಹೊರಬಂದವ ನ್ಯಾಯಾಲಯಕ್ಕೆ ಗೈರು
ಗೋಕರ್ಣ: ಮನೆ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಕಳೆದ 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗೋಕರ್ಣ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2016ರಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿ, ಗೋಕರ್ಣದ ಬಂಗ್ಲೆಗುಡ್ಡ ನಿವಾಸಿ ಶೇಖರ ಮಚ್ಚೆಂದ್ರ ಗಣಾಚಾರಿ, 2017ರಲ್ಲಿ ಜಾಮೀನು ಪಡೆದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದ.
ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸರು, ಖಚಿತ ಮಾಹಿತಿ ಹಾಗೂ ತಾಂತ್ರಿಕ ಸುಳಿವಿನ ಆಧಾರದ ಮೇಲೆ ಜುಲೈ 31ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಗೆ ಗೋಕರ್ಣ ಪೊಲೀಸ್ ಠಾಣೆಯ ಪಿಐ ಶ್ರೀಧರ ಎಸ್.ಆರ್. ನೇತೃತ್ವ ವಹಿಸಿದ್ದರು. ಪಿಎಸ್‌ಐ ಅನಿಲ್ ಬಿ.ಎಂ., ಸುನೀಲ್ ಎಂ., ಸಿಬ್ಬಂದಿಗಳಾದ ರಾಜೇಶ್ ನಾಯ್ಕ, ಶ್ರೀಕಾಂತ ಕೆ., ಪರಮೇಶ್ವರ ಬೆಂಡಗಟ್ಟಿ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಉದಯ ಗುನಗಾ ಹಾಗೂ ಬಬನ್ ಕದಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯನ್ನು ಪತ್ತೆಹಚ್ಚುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.