Ad
Ad
Home Local News ಪರಿಷತ್ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ

ಪರಿಷತ್ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ

0
3

ಯಲ್ಲಾಪುರ: ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿರುವುದು ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ಸೂಚಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಪದವೀಧರ, ಆಗ್ನೇಯ ಪದವೀಧರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಜೊತೆಗೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಶಿಕ್ಷಕರು ಮತ್ತು ಪದವೀಧರ ಮತದಾರರು ಕಾಂಗ್ರೆಸ್‌ ಬಗ್ಗೆ ಅಸಮಾಧಾನ ಹೊಂದಿರುವುದನ್ನು ಸೂಚಿಸುತ್ತದೆ ಎಂದು ಕೋಣೆಮನೆ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೊಸ ಶಾಲಾ ಕೊಠಡಿಗಳ ನಿರ್ಮಾಣವಾಗಿಲ್ಲ, ಹೊಸ ಶಿಕ್ಷಕರ ನೇಮಕಾತಿಯೂ ನಡೆದಿಲ್ಲ. ಪದವೀಧರ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯೂ ಈಡೇರಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಪದವೀಧರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಎಂಬ ಆತಂಕವನ್ನು ಹಣಕಾಸು ಇಲಾಖೆ ಮಾತ್ರವಲ್ಲದೆ, ಮುಖ್ಯಮಂತ್ರಿ ಕೂಡ ವ್ಯಕ್ತಪಡಿಸುತ್ತಿರುವುದು ನಾಗರಿಕರಲ್ಲಿ ಚಿಂತೆ ಮೂಡಿಸಿದೆ ಎಂದು ಕೋಣೆಮನೆ ಹೇಳಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಲು ಎದುರು ನೋಡುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿರುವ ಅವರು, ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ.

ಇವಿಎಂ ಕಾರಣದಿಂದ ಚುನಾವಣೆಯಲ್ಲಿ ಸೋಲಾಯಿತು ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಗ್ಗೆ ಏನು ಹೇಳುತ್ತಾರೆ ಎಂದು ಕೋಣೆಮನೆ ಪ್ರಶ್ನಿಸಿದ್ದಾರೆ. ಚುನಾವಣಾ ಸೋಲುಗಳ ಕುರಿತು ಕಾಂಗ್ರೆಸ್ ನಾಯಕರು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Previous articleಶಿರಸಿ | ಎರಡು ಗುಂಪುಗಳ ನಡುವೆ ಡಿಶುಂ ಡಿಶುಂ; ಇಬ್ಬರ ವಿರುದ್ಧ ಪ್ರಕರಣ 
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!