ಸಾವಿರ ವರ್ಷಗಳ ಇತಿಹಾಸ ಹೊತ್ತ ಹುಂಚದ ಹೊಂಬುಜ
ಮಲೆನಾಡಿನ ಹಸಿರು ಹೊದಿಕೆಯ ನಡುವೆ, ಕಾಡು-ಬೆಟ್ಟಗಳ ನಿಶ್ಶಬ್ದತೆಯಲ್ಲೊಂದು ಪವಿತ್ರ ತಾಣವಿದೆ. ಇಲ್ಲಿಗೆ ಕಾಲಿಟ್ಟಾಗ ಕೇವಲ ಒಂದು ದೇವಾಲಯದ ದರ್ಶನವಾಗುವುದಿಲ್ಲ, ಬದಲಾಗಿ ಸಾವಿರ ವರ್ಷಗಳ ಇತಿಹಾಸ, ಜೈನ ಪರಂಪರೆ ಮತ್ತು ಭಕ್ತಿಯೊಂದು ಜೀವಂತ ಅನುಭವವಾಗುತ್ತದೆ. ಅದೇ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ಹುಂಚ (ಹೊಂಬುಜ) ಶ್ರೀ ಪದ್ಮಾವತಿ ದೇವಿ ಕ್ಷೇತ್ರ.
ಕರ್ನಾಟಕದ ಪ್ರಮುಖ ಜೈನ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಹುಂಚಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಹೊಸನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕತೆಯ ಅಪೂರ್ವ ಸಂಗಮವಾಗಿದೆ.
ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಹುಂಚದ ವೈಭವ 7ನೇ–8ನೇ ಶತಮಾನಗಳವರೆಗೆ ಹೋಗುತ್ತದೆ. ಸಂತಾರ ರಾಜವಂಶದ ಸ್ಥಾಪಕ ಜಿನದತ್ತ ರಾಯನು ಇಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರವನ್ನು ಸ್ಥಾಪಿಸಿದನು ಎನ್ನಲಾಗುತ್ತದೆ. ನಂತರದ ಸಂತಾರ ಅರಸರು ಈ ಕ್ಷೇತ್ರದ ಅಭಿವೃದ್ಧಿಗೆ ಭೂಮಿ, ಚಿನ್ನ ಮತ್ತು ಹಲವು ಕೊಡುಗೆಗಳನ್ನು ನೀಡಿದರು.
ಹುಂಚದ ಪದ್ಮಾವತಿ ದೇವಾಲಯದ ಪ್ರಸ್ತುತ ರಚನೆಯನ್ನು ವೀರ ಸಂತಾರ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ವಿಕ್ರಮ ಸಂತಾರನ ಕಾಲದಲ್ಲಿ ಬಾಹುಬಲಿಗೆ ಸಮರ್ಪಿತವಾದ ಗುಡ್ಡದ ಬಸದಿ ಹಾಗೂ ಪಾರ್ಶ್ವನಾಥ ದೇವಾಲಯಗಳೂ ನಿರ್ಮಾಣಗೊಂಡವು. ಈ ಕಾರಣದಿಂದಲೇ ಹುಂಚವು ಕರ್ನಾಟಕದ ಪ್ರಮುಖ ಜೈನ ಕ್ಷೇತ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.
ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಶ್ರೀ ಪದ್ಮಾವತಿ ಬಸದಿ. ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಪದ್ಮಾವತಿ ದೇವಾಲಯ, ಜೈನ ಮಠ, ಪಂಚಕೂಟ ಬಸದಿ, ಪಾರ್ಶ್ವನಾಥ ವಿಗ್ರಹ, ಮುತ್ತಿನ ಕೆರೆ ಹಾಗೂ ಕುಮುದ್ವತಿ ನದಿಯ ಉಗಮ ಸ್ಥಾನವನ್ನು ಕಾಣಬಹುದು.
ದೇವಾಲಯ ಪ್ರವೇಶಿಸುವಾಗ ಹದಿನೈದು ಮೆಟ್ಟಿಲುಗಳ ಸರಣಿ ಎದುರಾಗುತ್ತದೆ. ಮಧ್ಯದಲ್ಲಿ ಕಾಣಿಸುವ ಪ್ರಾಚೀನ ಮಾನಸ್ತಂಭವು ಕ್ಷೇತ್ರದ ಪುರಾತನ ವೈಭವವನ್ನು ಸಾರುತ್ತದೆ. ಮುಂದೆ ಸಾಗಿದಾಗ ವಿಶಾಲವಾದ ಸಭಾಂಗಣ, ಪಾರ್ಶ್ವನಾಥ ದೇವಾಲಯ ಹಾಗೂ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಪ್ರಾಚೀನ ಜೈನ ವಿಗ್ರಹಗಳು ಗಮನ ಸೆಳೆಯುತ್ತವೆ.
ಹುಂಚದ ಬಗ್ಗೆ ಹಲವು ಪೌರಾಣಿಕ ಕಥೆಗಳೂ ಪ್ರಸಿದ್ಧವಾಗಿವೆ. ಮಥುರಾದ ರಾಜಕುಮಾರ ಜಿನದತ್ತನು ಪದ್ಮಾವತಿ ದೇವಿಯ ವಿಗ್ರಹವನ್ನು ಹೊತ್ತು ದಕ್ಷಿಣ ಭಾರತಕ್ಕೆ ಬಂದಾಗ, ಹುಂಚದಲ್ಲಿ ತಂಗಿದ್ದನು ಎನ್ನಲಾಗುತ್ತದೆ. ಕನಸಿನಲ್ಲಿ ಪದ್ಮಾವತಿ ದೇವಿಯು ಆತನಿಗೆ ಆಶೀರ್ವಾದ ನೀಡಿ, ಈ ಸ್ಥಳದಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸುವಂತೆ ಸೂಚಿಸಿದಳು ಎಂಬುದು ಸ್ಥಳೀಯ ನಂಬಿಕೆ.
ಈ ಕ್ಷೇತ್ರದ ವಿಶೇಷತೆಗಳಲ್ಲಿ ಲಕ್ಕಿ ಮರವೂ ಒಂದು. ಅದು ಎಂದಿಗೂ ಒಣಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗೆಯೇ ಮುತ್ತಿನ ಕೆರೆ ಎಂದಿಗೂ ಬತ್ತುವುದಿಲ್ಲ ಎಂಬುದು ಭಕ್ತರ ನಂಬಿಕೆ. ಕುಮುದ್ವತಿ ನದಿಯ ಉಗಮ ಸ್ಥಾನವೂ ಇಲ್ಲಿನ ಮತ್ತೊಂದು ವೈಶಿಷ್ಟ್ಯ.
ಪಾಶ್ವ ಪದ್ಮಾವತಿ ಬಸದಿ ಇಲ್ಲಿನ ಪ್ರಮುಖ ದರ್ಶನೀಯ ಸ್ಥಳವಾಗಿದ್ದು, ಪದ್ಮಾಸನದಲ್ಲಿರುವ ಪದ್ಮಾವತಿ ದೇವಿಯ ವಿಗ್ರಹ ಹಾಗೂ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಲಾದ ಪಾರ್ಶ್ವನಾಥನ ವಿಗ್ರಹ ಭಕ್ತರ ಮನಸೆಳೆಯುತ್ತದೆ.
ಹುಂಚ ತಲುಪಲು ಶಿವಮೊಗ್ಗದಿಂದ ಸುಮಾರು 55 ಕಿ.ಮೀ ಪ್ರಯಾಣಿಸಬೇಕು. ಹತ್ತಿರದ ರೈಲು ನಿಲ್ದಾಣಗಳು ಶಿವಮೊಗ್ಗ ಮತ್ತು ಅರಸಾಳು. ಮಂಗಳೂರು ವಿಮಾನ ನಿಲ್ದಾಣದಿಂದಲೂ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು.
ಮಲೆನಾಡಿನ ಹಸಿರಿನ ನಡುವೆ ನೆಲೆಸಿರುವ ಹುಂಚ ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ. ಅದು ಇತಿಹಾಸ, ಪರಂಪರೆ ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಒಂದು ಅಪೂರ್ವ ಅನುಭವ. ಒಮ್ಮೆ ಭೇಟಿ ನೀಡಿದರೆ ಮನಸ್ಸಿನಲ್ಲಿ ಉಳಿಯುವಂತಹ ಮೌನದ ಆಧ್ಯಾತ್ಮಿಕ ತಾಣ ಇದು.
– ರಕ್ಷಿತಾ ಹೆಚ್. ಗೋಪಾಲ್, ಸಂಪೆಕಟ್ಟೆ.
ಎಂ.ಜಿ.ಎಂ ಕಾಲೇಜು ಉಡುಪಿ.