ಹೊನ್ನಾವರ: ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಹೊನ್ನಾವರ ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಪರಾರಿಯಾಗಿರುವ ಘಟನೆ ಆ.30ರಂದು ನಡೆದಿದೆ.
ಆ.30ರಂದು ಸಂಜೆ 5 ಗಂಟೆ ಸುಮಾರಿಗೆ ಆರೋಪಿತರು ಕರ್ಕಿ ರೈಲ್ವೆ ನಿಲ್ದಾಣದ ಬಳಿಯ ಅರಣ್ಯ ಪ್ರದೇಶದಲ್ಲಿ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು, ಅವುಗಳ ಮೇಲೆ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದರೆಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮಂಜುನಾಥ ತಿಮ್ಮಪ್ಪ ಗೌಡ (40), ಶಿವಾನಂದ ಅಲಿಯಾಸ್ ಶ್ರೀನಿವಾಸ ಮಾಸ್ತಿ ಮುಕ್ರಿ (31) ಹಾಗೂ ಅನಂತ ವೆಂಕಟರಮಣ ಪಟಗಾರ (32) ಎಂಬ ಮೂವರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿದ್ದು, ಮತ್ತೋರ್ವ ಆರೋಪಿತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಹೊನ್ನಾವರ ತಾಲೂಕಿನ ಹಳದಿಪುರ ಅಗ್ರಹಾರ, ಹಬ್ಬುಗದ್ದೆ ಹಾಗೂ ಕುಮಟಾ ತಾಲೂಕಿನ ಹಳಕಾರ ನಿವಾಸಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ವೇಳೆ ಅಂಕಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯ ಪಿಎಸ್ಐ (ತನಿಖೆ-01) ಮಹಾಂತೇಶ ವಾಲ್ಮೀಕಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.