Friday, July 24, 2026
Join WhatsApp Group
HomeLocal Newsಗ್ರಾಮದ ಕಲಾ ಸಂಸ್ಕೃತಿಗೆ ಹೊಸ ಚೈತನ್ಯ

ಗ್ರಾಮದ ಕಲಾ ಸಂಸ್ಕೃತಿಗೆ ಹೊಸ ಚೈತನ್ಯ

ಹುತ್ಕಂಡ ಕ್ರಾಸ್‌ನಲ್ಲಿ ಮಾ.28ಕ್ಕೆ ವಿಶಿಷ್ಟ ನಾಟಕೋತ್ಸವ

ಯಲ್ಲಾಪುರದ ಹುತ್ಕಂಡ ಕ್ರಾಸ್‌ನ ಹಾಲು ಡೇರಿ ಕಟ್ಟೆಯ ಮೇಲೆ ಸೇರುತ್ತಿದ್ದ ಗ್ರಾಮದ ಕೆಲ ಸಮಾನ ಮನಸ್ಕರ ತಲೆಯಲ್ಲಿ ಹೊಸದೊಂದು ವಿಚಾರ ಓಡುತ್ತಿತ್ತು. ಕಲಾಕ್ಷೇತ್ರದಲ್ಲಿ ನಾವೆಲ್ಲರೂ ಸೇರಿ ಏನಾದರೊಂದು ಸೇವೆ ಸಲ್ಲಿಸಬೇಕು, ಗ್ರಾಮದಲ್ಲಿ ನಿಯಮಿತವಾಗಿ ಏನಾದರೊಂದು ಚಟುವಟಿಕೆ ನಡೆಸಬೇಕು ಎಂದು.

ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು ಶ್ರೀ ಮಹಾಗಣಪತಿ ಕಲಾ ಬಳಗ. ಕಳೆದ ಮೂರು ವರ್ಷಗಳಿಂದ ವರ್ಷದಲ್ಲಿ ಒಂದು ದಿನ ವಿಶಿಷ್ಟವೆನಿಸುವ ನಾಟಕ ಪ್ರದರ್ಶನ ನೀಡುತ್ತ ಕಲಾಸಕ್ತರ ಮನ ಗೆಲ್ಲುತ್ತಿದೆ. ನಾಟಕ ಪ್ರದರ್ಶನದೊಂದಿಗೇ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಮೊದಲಾದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಗ್ರಾಮದಲ್ಲಿ ಉತ್ತಮ ಕಲಾ ಸಂಘಟನೆ ಕೈಗೊಳ್ಳುತ್ತಿದೆ.

ಅಂದಿನ ಗ್ರಾ.ಪಂ ಸದಸ್ಯರಾದ ಸುಬ್ಬಣ್ಣ ಉದ್ದಾಬೈಲ ಅಧ್ಯಕ್ಷತೆಯಲ್ಲಿ, ಟಿಎಸ್‌ಎಸ್‌ ನಿರ್ದೇಶಕ ಕೃಷ್ಣ ಹೆಗಡೆ ಉಪಾಧ್ಯಕ್ಷರಾಗಿ, ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ ಕಾರ್ಯದರ್ಶಿಯಾಗಿ, ನರಸಿಂಹ ಜೂಜಿನಬೈಲ್‌ ಸೇರಿದಂತೆ ಗೌರವಾಧ್ಯಕ್ಷರಾಗಿ ಎಲ್‌ಎಸ್‌ಎಂಪಿ ಸೊಸೈಟಿಯ ಅಧ್ಯಕ್ಷ ನಾಗರಾಜ ಕವಡಿಕೆರೆ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡು ಐದಾರು ಜನರೊಂದಿಗೆ ಪ್ರಾರಂಭವಾದ ಕಲಾ ಬಳಗ ಇಂದು 30ಕ್ಕೂ ಹೆಚ್ಚು ಸಕ್ರಿಯ ಸದಸ್ಯರ ಸಹಕಾರದೊಂದಿಗೆ ಮುನ್ನಡೆಯುತ್ತಿದೆ.

ವರ್ಷದಿಂದ ವರ್ಷಕ್ಕೆ ಹುತ್ಕಂಡ ಕ್ರಾಸ್‌ ಬಳಗದ ನಾಟಕ ಯಾವಾಗ? ಎಂದು ನಿರೀಕ್ಷಿಸುವ ಮಟ್ಟಕ್ಕೆ ಬೆಳೆದುಬಂದಿದೆ. ಇದೀಗ, ಮೂರನೇ ವರ್ಷದ ಪ್ರದರ್ಶನವಾಗಿ, ಮಾರ್ಚ್‌ 28ರಂದು ಹೆಡೆಯೆತ್ತಿದ ಸರ್ಪಕ್ಕೆ ಗುರಿಯಿಟ್ಟ ಗರಿಡ ಎಂಬ ಸುಂದರ ಸಾಮಾಜಿಕ ನಾಟಕವನ್ನು ಬಳಗ ಪ್ರದರ್ಶಿಸಲಿದೆ. ನಾಟಕವಷ್ಟೇ ಅಲ್ಲ, ಸ್ಥಳೀಯ ಸಾಧಕರನ್ನು, ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವವರನ್ನು ಗೌರವಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.

ಅಂದು ನಡೆಯುವ ಕಾರ್ಯಕ್ರಮದಲ್ಲಿ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಐವರನ್ನು ಸನ್ಮಾನಿಸಲು ಉದ್ದೇಶಿಸಿದೆ. ಸುಮಾರು 25 ವರ್ಷಗಳ ಹಿಂದೆಯೇ ನಾಟಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಹುತ್ಕಂಡದ ಕೆ.ಎನ್.ಭಟ್‌ ಹುತ್ಕಂಡ ಹಾಗೂ ನರಸಿಂಹ ಭಾಗ್ವತ ಗುಂಡ್ಕಲ್‌, ವಿಶೇಷವಾಗಿ ರೈತರ ಕೃಷಿ ಕೆಲಸಗಳಿಗೆ ಉಪಯುಕ್ತ ಸಲಕರಣೆಗಳನ್ನು ಸಿದ್ಧಪಡಿಸಿಕೊಡುವ ಕೆಲಸ ಮಾಡುತ್ತ ಸೇವೆ ಸಲ್ಲಿಸುತ್ತಿರುವ ಉಪಳೇಶ್ವರದ ಮಾದೇವ ಆಚಾರಿ ಅವರನ್ನು, ಎಲೆಮರೆಯ ಕಾಯಿಯಂತಿರುವ, ನಾಟಿ ಔಷಧಿ ನೀಡುವ ನರಸಿಂಹ ಭಟ್‌ ಜೋಗಿಬರೇಹಳ್ಳ, ಲಕ್ಷ್ಮಣ ಮರಾಠಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಎಲ್‌ಎಸ್‌ಎಂಪಿ ಅಧ್ಯಕ್ಷ ನಾಗರಾಜ ಕವಡಿಕೆರೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಯುವ ಉದ್ಯಮಿ ಬಾಲಕೃಷ್ಣ ನಾಯ್ಕ, ಪ್ರಮುಖರಾದ ಶಿವಲಿಂಗಯ್ಯ ಅಲ್ಲಯ್ಯನಮಠ, ಅನಂತಮೂರ್ತಿ ಹೆಗಡೆ ಶಿರಸಿ, ಎಲ್.ಪಿ. ಭಟ್‌ ಗುಂಡ್ಕಲ್‌, ನಾರಾಯಣ ಭಟ್‌ ಅಗ್ಗಾಶಿಕುಂಬ್ರಿ ಪಾಲ್ಗೊಳ್ಳಲಿದ್ದಾರೆ.

 ಸಭಾ ಕಾರ್ಯಕ್ರಮದ ನಂತರ ಹೆಡೆ ಎತ್ತಿದ ಸರ್ಪಕ್ಕೆ ಗುರಿಯಿಟ್ಟ ಗರುಡ ಎಂಬ ನಾಟಕ ಪ್ರದರ್ಶನವಾಗಲಿದೆ. ಗ್ರಾಮದಲ್ಲಿ ಕಲಾ ಚಟುವಟಿಕೆಗಳಿಗೆ ಎಲ್ಲರ ಪ್ರೋತ್ಸಾಹ ಅತ್ಯಂತ ಮುಖ್ಯ. ಬನ್ನಿ, ಕಲೆಯನ್ನು ಬೆಳೆಸೋಣ, ಕಲಾವಿದರನ್ನು ಉತ್ತೇಜಿಸೋಣ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share