Friday, July 24, 2026
Join WhatsApp Group
HomeInformationಒಂದು ಕಪ್ ಚಹಾಕ್ಕಿಂತಲೂ ಅಗ್ಗದ ಡೇಟಾ!

ಒಂದು ಕಪ್ ಚಹಾಕ್ಕಿಂತಲೂ ಅಗ್ಗದ ಡೇಟಾ!

ಭಾರತವೇಕೆ ವಿಶ್ವದಲ್ಲೇ ಅತಿ ಹೆಚ್ಚು ಇಂಟರ್ನೆಟ್ ಬಳಸುವ ದೇಶ?!

ಒಂದು ಕಾಲದಲ್ಲಿ ಮೊಬೈಲ್ ಡೇಟಾ ಆನ್ ಮಾಡುವುದು ಅಂದರೆ ಮನೆಯಲ್ಲೇ ತುರ್ತು ಸಭೆ ನಡೆದಂತಿತ್ತು! “ಡೇಟಾ ಆಫ್ ಮಾಡಿದ್ಯಾ?”, “ಯೂಟ್ಯೂಬ್ ನೋಡ್ಬೇಡ!”, “ವಾಟ್ಸ್ಆ್ಯಪ್‌ನಲ್ಲಿ ಫೋಟೋ ಕಳಿಸ್ಬೇಡ, ಡೇಟಾ ಖಾಲಿಯಾಗುತ್ತೆ!” ಎಂಬ ಎಚ್ಚರಿಕೆಗಳು ಪ್ರತಿಯೊಂದು ಮನೆಯಲ್ಲೂ ಕೇಳಿಬರುತ್ತಿದ್ದವು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ. ಬೆಳಗ್ಗೆ ಕಣ್ಣು ತೆರೆದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಮ್ಮ ಬೆರಳುಗಳು ಮೊಬೈಲ್‌ನಲ್ಲೇ ಓಡಾಡುತ್ತಿರುತ್ತವೆ. ರೀಲ್ಸ್, ಯೂಟ್ಯೂಬ್, ಓಟಿಟಿ, ಆನ್‌ಲೈನ್ ಕ್ಲಾಸ್, ಬ್ಯಾಂಕಿಂಗ್, ವಿಡಿಯೊ ಕಾಲ್… ಹೀಗೆ ಉಸಿರಾಡುವುದನ್ನು ಬಿಟ್ಟರೆ ಉಳಿದ ಬಹುತೇಕ ಕೆಲಸಗಳೆಲ್ಲ ಇಂಟರ್ನೆಟ್‌ನಲ್ಲೇ!

ಇದಕ್ಕೆ ಕಾರಣವೂ ಇದೆ. ಭಾರತದಲ್ಲಿ ಮೊಬೈಲ್ ಡೇಟಾ ಬೆಲೆ ಜಗತ್ತಿನಲ್ಲೇ ಅತ್ಯಂತ ಕಡಿಮೆ. ಹೀಗಾಗಿ ಇನ್ನೊಂದು ವಿಡಿಯೊ ನೋಡೋಣ, ಇನ್ನೊಂದಿಷ್ಟು ರೀಲ್ ಸ್ಕ್ರೋಲ್ ಮಾಡೋಣ ಎಂದು ಶುರುವಾಗಿ, ಗಂಟೆಗಳವರೆಗೆ ಮುಂದುವರಿಯುತ್ತದೆ.

ಇತ್ತೀಚಿನ ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಒಬ್ಬ ಭಾರತೀಯ ತಿಂಗಳಿಗೆ ಸರಾಸರಿ 36 ಜಿಬಿ ಡೇಟಾ ಬಳಸುತ್ತಿದ್ದಾನೆ. ಅಂದರೆ ದಿನಕ್ಕೆ ಒಂದು ಜಿಬಿಗಿಂತ ಹೆಚ್ಚು! ಆಶ್ಚರ್ಯ ಏನೆಂದರೆ, ಈ ವಿಷಯದಲ್ಲಿ ಭಾರತ ಅಮೆರಿಕ, ಚೀನಾ ಹಾಗೂ ಹಲವು ಶ್ರೀಮಂತ ರಾಷ್ಟ್ರಗಳನ್ನೂ ಹಿಂದಿಕ್ಕಿದೆ. ಜಗತ್ತಿನ ಸರಾಸರಿ ಬಳಕೆ 21 ಜಿಬಿ ಇದ್ದರೆ, ಭಾರತೀಯರು ಅದಕ್ಕಿಂತ ಬಹಳ ಮುಂದೆ ಓಡುತ್ತಿದ್ದಾರೆ.

ಡೇಟಾ ಬಳಕೆ ಹೆಚ್ಚಾಗಲು ಕಾರಣ ಕೇವಲ ಅಗ್ಗದ ದರವಲ್ಲ. ಈಗ ಸಾವಿರಾರು ರೂಪಾಯಿಗೆ ಸ್ಮಾರ್ಟ್‌ಫೋನ್ ಸಿಗುತ್ತದೆ. ಅದಕ್ಕೆ ಜೊತೆಗೆ ಜಿಯೋ, ಏರ್‌ಟೆಲ್ ಮತ್ತಿತರ ಕಂಪನಿಗಳ ಸ್ಪರ್ಧೆಯಿಂದ ದಿನವೂ  ಹೆಚ್ಚು ಡೇಟಾ ಸಿಗುತ್ತಿದೆ. ಪರಿಣಾಮ, ಚಿಕ್ಕ ಮಕ್ಕಳು ಕಾರ್ಟೂನ್ ನೋಡುತ್ತಿದ್ದಾರೆ, ಅಜ್ಜ-ಅಜ್ಜಿಯರು ಭಕ್ತಿಗೀತೆ ಕೇಳುತ್ತಿದ್ದಾರೆ, ಅಪ್ಪ ಸುದ್ದಿ ನೋಡುತ್ತಿದ್ದಾರೆ, ಅಮ್ಮ ಅಡುಗೆ ವಿಡಿಯೊ ನೋಡುತ್ತಿದ್ದಾರೆ. ಮನೆಯಲ್ಲಿರುವ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್, ಎಲ್ಲರ ಮೊಬೈಲ್‌ನಲ್ಲೂ ಡೇಟಾ!

ಇನ್ನೂ ಕುತೂಹಲಕಾರಿ ಸಂಗತಿ ಏನೆಂದರೆ, 2031ರ ವೇಳೆಗೆ ಒಬ್ಬ ಭಾರತೀಯ ತಿಂಗಳಿಗೆ 65 ಜಿಬಿಡೇಟಾ ಬಳಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಅಷ್ಟೇ ಅಲ್ಲ, ಆಗ ದೇಶದಲ್ಲಿ 100 ಕೋಟಿಗೂ ಹೆಚ್ಚು 5G ಸಂಪರ್ಕಗಳು ಇರಲಿವೆ ಎನ್ನಲಾಗಿದೆ. ಅಂದರೆ ಇಂಟರ್ನೆಟ್ ಇನ್ನಷ್ಟು ವೇಗವಾಗಲಿದೆ, ನಮ್ಮ ಡೇಟಾ ಖರ್ಚೂ ಅದೇ ವೇಗದಲ್ಲಿ ಹೆಚ್ಚಾಗಲಿದೆ!

ಒಮ್ಮೆ ನೆನಪಿಸಿಕೊಳ್ಳಿ… ಹಿಂದೆ ಮೊಬೈಲ್ ರೀಚಾರ್ಜ್ ಮಾಡಿಸಿಕೊಂಡರೆ ಎಷ್ಟು ನಿಮಿಷ ಮಾತನಾಡಬಹುದು ಎಂದು ಲೆಕ್ಕ ಹಾಕುತ್ತಿದ್ದೆವು. ಈಗ ಎಷ್ಟು ಜಿಬಿ ಡೇಟಾ ಸಿಗುತ್ತದೆ ಎಂಬುದೇ ಮೊದಲ ಪ್ರಶ್ನೆ. ಕಾಲ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ, ನಮ್ಮ ಅಭ್ಯಾಸಗಳೂ ಬದಲಾಗಿವೆ.

ಒಟ್ಟಾರೆ, ಭಾರತದಲ್ಲಿ ಇಂದು ಡೇಟಾ ಇನ್ನಷ್ಟು ಅಗ್ಗವಾಗಿದೆ. ಕೆಲವರು ತಮಾಷೆಗೆ ಟೀ ಕುಡಿದಷ್ಟು ಸುಲಭವಾಗಿ ಡೇಟಾ ಖರ್ಚು ಮಾಡ್ತೀವಿ!” ಎನ್ನುತ್ತಾರೆ. ಅದಕ್ಕೇ ಇರಬಹುದು, ಡಿಜಿಟಲ್ ಜಗತ್ತಿನಲ್ಲಿ ಭಾರತೀಯರ ಹೆಜ್ಜೆ ಇಂದು ಎಲ್ಲರಿಗಿಂತ ವೇಗವಾಗಿ ಸಾಗುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share