Friday, July 24, 2026
Join WhatsApp Group
HomeLocal Storyಬಿಳಿ ಕೋಟಿನೊಳಗೆ ಮಿಡಿಯುವ ಮಾನವೀಯ ಹೃದಯ

ಬಿಳಿ ಕೋಟಿನೊಳಗೆ ಮಿಡಿಯುವ ಮಾನವೀಯ ಹೃದಯ

ಸೇವೆಯೇ ಧರ್ಮವೆಂದು ಬದುಕುತ್ತಿರುವ ವೈದ್ಯ ಡಾ. ಪ್ರಸನ್ನ ಫಾಯದೆ

ಯಲ್ಲಾಪುರ: ವೈದ್ಯಕೀಯ ವೃತ್ತಿ ಎಂದರೆ ಕೇವಲ ಔಷಧಿ ಬರೆದುಕೊಡುವ ವ್ಯಕ್ತಿ ಎಂದು ಭಾವಿಸುವವರೂ ಇದ್ದಾರು. ಆದರೆ, ನೋವಿನಲ್ಲಿರುವ ವ್ಯಕ್ತಿಗೆ ಭರವಸೆ ತುಂಬುವುದು, ಆತಂಕದಲ್ಲಿರುವ ಕುಟುಂಬಕ್ಕೆ ಧೈರ್ಯ ನೀಡುವುದು ಕೂಡ ಇದೇ ಬಿಳಿ ಕೋಟಿನ ವ್ಯಕ್ತಿಯೇ! ಈ ಮಾತನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ವೈದ್ಯರ ಸಾಲಿನಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಡಾ. ಪ್ರಸನ್ನ ಪದ್ಮಾಕರ ಫಾಯದೆ ಅವರು ವಿಶಿಷ್ಟ ಸ್ಥಾನ ಹೊಂದಿದ್ದಾರೆ.

1980ರ ಜೂನ್ 7ರಂದು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯಲ್ಲಿ ಜನಿಸಿದ ಡಾ. ಪ್ರಸನ್ನ ಫಾಯದೆ, ಬಾಲ್ಯದಿಂದಲೇ ಶಿಸ್ತು, ಸರಳತೆ ಮತ್ತು ಸೇವಾ ಮನೋಭಾವವನ್ನು ಜೀವನದ ಮೌಲ್ಯಗಳಾಗಿ ಬೆಳೆಸಿಕೊಂಡವರು. ಮಂಚಿಕೇರಿ ಹಾಗೂ ಯಲ್ಲಾಪುರದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಶೃಂಗೇರಿಯಲ್ಲಿ ಬಿಎಎಂಎಸ್ (BAMS) ಪದವಿ ಪಡೆದರು.

ಪದವಿ ನಂತರ ಉತ್ತಮ ಆದಾಯದ ಅವಕಾಶಗಳತ್ತ ಮುಖ ಮಾಡದೆ, ಜನಸೇವೆಗೆ ಆದ್ಯತೆ ನೀಡಿದ ಅವರು 2003ರಿಂದ ಕೆಲವು ವರ್ಷಗಳ ಕಾಲ ಕೇರಳದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದರು. ಬಳಿಕ 2007ರಲ್ಲಿ ಯಲ್ಲಾಪುರ ತಾಲೂಕಿನ ನಂದೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆ ಎಂದರೆ ಸವಾಲುಗಳ ಸರಮಾಲೆ. ಸೀಮಿತ ಸೌಲಭ್ಯಗಳು, ತುರ್ತು ಪರಿಸ್ಥಿತಿಗಳು ಮತ್ತು ದೂರದ ಹಳ್ಳಿಗಳ ನಡುವೆಯೂ ಅವರು ಕರ್ತವ್ಯವನ್ನು ಆದ್ಯತೆಯಾಗಿ ಸ್ವೀಕರಿಸಿದರು.

ಡಾ. ಪ್ರಸನ್ನ ಫಾಯದೆ ಅವರ ಸೇವೆಯ ವಿಶೇಷತೆ ಎಂದರೆ, ರೋಗಿಯನ್ನು ಕೇವಲ ಚಿಕಿತ್ಸೆಗೆ ಬಂದ ವ್ಯಕ್ತಿಯಾಗಿ ಅಲ್ಲ, ಒಂದು ಕುಟುಂಬದ ಸದಸ್ಯರಂತೆಯೇ ನೋಡುವ ದೃಷ್ಟಿಕೋನ. ಚಿಕಿತ್ಸೆ ನೀಡುವ ಜೊತೆಗೆ ಆತ್ಮವಿಶ್ವಾಸ ತುಂಬುವ ಅವರ ಸರಳ ನಡೆ-ನುಡಿ ಅನೇಕ ಜನರ ವಿಶ್ವಾಸವನ್ನು ಗಳಿಸಿದೆ. ಅವರ ಸೇವಾ ಅವಧಿಯಲ್ಲಿ ನಂದೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 2009ರಲ್ಲಿ ಜಿಲ್ಲೆಯ ಅತ್ಯುತ್ತಮ ಆರೋಗ್ಯ ಕೇಂದ್ರ ಎಂಬ ಗೌರವಕ್ಕೆ ಪಾತ್ರವಾಗಿರುವುದು ಅವರ ಸಮರ್ಪಣೆಯ ಒಂದು ಮಹತ್ವದ ಗುರುತು.

ಸುಮಾರು 12 ವರ್ಷಗಳ ಸರ್ಕಾರಿ ಸೇವೆಯ ಬಳಿಕ ಅವರು ತಮ್ಮ ಸ್ವಗ್ರಾಮ ಮಂಚಿಕೇರಿಯಲ್ಲಿ ‘ಅಮೃತಸಂಜೀವಿನಿ’ ಚಿಕಿತ್ಸಾಲಯ ಆರಂಭಿಸಿದರು. ಇಂದು ಈ ಚಿಕಿತ್ಸಾಲಯವು ಕೇವಲ ಆರೋಗ್ಯ ಸೇವೆ ನೀಡುವ ಕೇಂದ್ರವಾಗಿ ಅಷ್ಟೇ ಅಲ್ಲ, ಜನರು ವಿಶ್ವಾಸದಿಂದ ಭೇಟಿ ನೀಡುವ ಸ್ಥಳವಾಗಿಯೂ ಗುರುತಿಸಿಕೊಂಡಿದೆ. ಚಿಕಿತ್ಸೆಯ ಜೊತೆಗೆ ಆರೋಗ್ಯ ಜಾಗೃತಿ, ಗ್ರಾಮೀಣ ಜನರಲ್ಲಿ ಸ್ವಚ್ಛತೆ ಮತ್ತು ರೋಗ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಸಾರ್ವಜನಿಕ ಶ್ರೀ ನಾಗರಕಟ್ಟೆ ದೇವಸ್ಥಾನ ಸಮಿತಿ (ರಿ.), ಉಮ್ಮಚಗಿ ವತಿಯಿಂದ ಅವರಿಗೆ ‘ಸರ್ವರೋಗಪ್ರಶಮನ’ ಎಂಬ ಗೌರವ ನೀಡಿ ಸನ್ಮಾನಿಸಲಾಗಿದೆ. ಇದು ಡಾ. ಪ್ರಸನ್ನ ಫಾಯದೆ ಅವರ ಜನಸೇವೆಗೆ ಸಮಾಜ ಸಲ್ಲಿಸಿದ ಕೃತಜ್ಞತೆಯ ಸಂಕೇತ.

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಎಂದರೆ ದೊಡ್ಡ ಆಸ್ಪತ್ರೆ ಕಟ್ಟುವುದು ಮಾತ್ರವಲ್ಲ, ಜನರ ವಿಶ್ವಾಸ ಗಳಿಸುವುದೂ ಹೌದು ಎಂಬುದನ್ನು ಡಾ. ಪ್ರಸನ್ನ ಪದ್ಮಾಕರ ಫಾಯದೆ ಅವರ ಬದುಕು ಸಾರುತ್ತದೆ. ಸೇವೆ, ಸರಳತೆ ಮತ್ತು ಮಾನವೀಯತೆಯ ಮೂಲಕ ಅವರು ವೈದ್ಯಕೀಯ ವೃತ್ತಿಗೆ ಗೌರವ ತಂದುಕೊಟ್ಟಿರುವ ವ್ಯಕ್ತಿತ್ವ. ಇಂತಹ ವೈದ್ಯರ ಬದುಕಿನ ಪಯಣ ಮುಂದಿನ ಪೀಳಿಗೆಯ ವೈದ್ಯರಿಗೆ ಮಾತ್ರವಲ್ಲ, ಸಮಾಜಕ್ಕೂ ಸ್ಪೂರ್ತಿದಾಯಕವಾಗಿದೆ.

✍️ ಶ್ರೀಕಾಂತ್ ವೆಂಕಟೇಶ್ ನಾಯ್ಕ್.

(ಉತ್ತರಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಮೂಲ್ಯ ರತ್ನಗಳನ್ನು ಪರಿಚಯಿಸುವ ನಮ್ಮ ಚಿಕ್ಕ ಪ್ರಯತ್ನವೇ ‘ಇವರು ನಮ್ಮವರು’ ಅಂಕಣ. ನೀವೂ ಕೂಡ ನಿಮ್ಮ ನಡುವಿನ ಯಾವುದೇ ಕ್ಷೇತ್ರದ ಸಾಧಕರನ್ನು ಸಾವಿರಾರು ಜನರಿಗೆ ಪರಿಚಯಿಸಬಹುದು. ಲೇಖನ/ಸುಳಿವುಗಳನ್ನು 8970741424 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು)

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share