Friday, July 24, 2026
Join WhatsApp Group
HomeCrimeಷೇರು ಲಾಭಾಂಶದ ಆಸೆಗೆ ಬಲಿಯಾದ ಭಟ್ಟರು!

ಷೇರು ಲಾಭಾಂಶದ ಆಸೆಗೆ ಬಲಿಯಾದ ಭಟ್ಟರು!

ಫೇಸ್‌ಬುಕ್‌ ಜಾಹೀರಾತು ನಂಬಿ 20 ಲಕ್ಷ ರೂ ಹಣ ಹೋಯ್ತು!

ಕಾರವಾರ: ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ, ಬಳಿಕ ಕೋಟ್ಯಂತರ ಲಾಭಾಂಶ ಸಿಗುತ್ತದೆ ಎಂದು ಹೇಳಿ ನಿವೃತ್ತ ಎಲ್‌ಐಸಿ ಏಜೆಂಟ್ ಒಬ್ಬರಿಂದ ರೂ. 20.44 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಕಾರವಾರದ ಸುಂಕೇರಿ, ವೆಂಕಟೇಶ ದೇವಸ್ಥಾನದ ಹತ್ತಿರ ನಿವಾಸಿಯಾಗಿರುವ ದಾಮೋದರ ಪಾಂಡುರಂಗ ಭಟ್ಟ (71) ಅವರು ಈ ಕುರಿತು ದೂರು ನೀಡಿದ್ದಾರೆ. ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, 2022ರ ಫೆಬ್ರವರಿ ತಿಂಗಳಲ್ಲಿ ದಾಮೋದರ ಭಟ್ಟ ಅವರು ಫೇಸ್‌ಬುಕ್ ಸಾಮಾಜಿಕ ಜಾಲತಾಣ ಬಳಸುವ ವೇಳೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಜಾಹೀರಾತು ಗಮನಿಸಿದ್ದರು. ಅದನ್ನು ನಂಬಿದ ಅವರು ಜಾಹೀರಾತಿನ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದರು.

ಆರೋಪಿತರು ಯುಪಿಐ ಐಡಿ ಕಳುಹಿಸಿದ್ದು, ಅದರ ಮೂಲಕ ದಾಮೋದರ ಭಟ್ಟ ಅವರು ಮೊದಲ ಹಂತವಾಗಿ 20 ಸಾವಿರ ರೂ ಹಣ ವರ್ಗಾವಣೆ ಮಾಡಿ ಹೂಡಿಕೆ ಮಾಡಿದ್ದರು.

ನಂತರ 2025ರ ಅಕ್ಟೋಬರ್ ತಿಂಗಳಲ್ಲಿ ವಾಟ್ಸಪ್ ಕರೆ ಮೂಲಕ ತಮ್ಮನ್ನು ಇಂಗ್ಲೆಂಡ್‌ನ Securities and Exchange Commission ನಲ್ಲಿ Senior Financial Officer ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಸಂಪರ್ಕಿಸಿದ್ದಾರೆ. 2022ರಲ್ಲಿ ಹೂಡಿಕೆ ಮಾಡಿದ್ದ ದಕ್ಷಿಣ ಆಫ್ರಿಕಾದ ಕಂಪನಿಯ ವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ಕಂಪನಿ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.

ಆದರೆ ಹೂಡಿಕೆ ಮಾಡಿದ ಹಣಕ್ಕೆ ಲಾಭಾಂಶ ಸೇರಿ ಒಟ್ಟು 51 ಲಕ್ಷ ರೂ ಹಣ ಪಿರ್ಯಾದಿದಾರರ ಖಾತೆಯಲ್ಲಿ ಜಮಾ ಆಗಿದೆ ಎಂದು ನಂಬಿಸಿ, ಆ ಹಣವನ್ನು ಭಾರತಕ್ಕೆ ಮರಳಿ ಪಡೆಯಲು ಕ್ರಿಪ್ಟೋ ಕರೆನ್ಸಿಗೆ ಪರಿವರ್ತನೆ, ಪೆನಾಲ್ಟಿ, ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗಿದೆ ಎಂದು ಹೇಳಿದ್ದಾರೆ.

ಈ ನೆಪದಲ್ಲಿ 2025ರ ನವೆಂಬರ್ 21ರಿಂದ 2026ರ ಫೆಬ್ರವರಿ 3ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 20,44,000 ರೂ ಹಣ ಜಮಾ ಮಾಡಿಸಿಕೊಂಡು ಬಳಿಕ ಹಣ ಮರಳಿ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತರ ಪತ್ತೆಗೆ ಮುಂದಾಗಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share